ಬಾಲನಟನಾಗಿಯೇ ನ್ಯಾಷನಲ್ ಅವಾರ್ಡ್ ನ ಮುಡಿಗೇರಿಸಿಕೊಂಡಿದ್ದ ಮಾಸ್ಟರ್ ಲೋಹಿತ್, ಪುನೀತ್ ರಾಜ್ ಕುಮಾರ್ ಆಗೋಕೆ ಮುನ್ನ ದೊಡ್ಮನೆಯ ಅಪ್ಪು ಆದ್ರು. ನಟಸಾರ್ವಭೌಮ ಡಾ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಎಲ್ಲರೂ ಪುನೀತ್ ರನ್ನ ಪ್ರೀತಿಯಿಂದ ಅಪ್ಪು ಅಂತಲೇ ಕರೆಯುತ್ತಿದ್ರು. ಆಗ ಅಪ್ಪು ಹೆಸರಲ್ಲೇ ಬಂದಂತಹ ಚಿತ್ರ ಅಪ್ಪು. ತೆಲುಗಿನ ಕಲ್ಟ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದಂತಹ ಅಪ್ಪು ಸಿನಿಮಾ ಮೂಲಕ ಹೀರೋ ಆಗಿಯೂ ಕೂಡ ಕನ್ನಡಿಗರ ಹೃದಯಕ್ಕೆ ಅಪ್ಪುಗೆ ನೀಡಿದ್ರು ರಾಜರತ್ನ ಪುನೀತ್ ರಾಜ್ ಕುಮಾರ್.
ಅಂದಹಾಗೆ ಅಪ್ಪು ಈಗ ನಮ್ಮೊಟ್ಟಿಗೆ ಇಲ್ಲ. ಆದ್ರೆ ಕನ್ನಡಿಗರ ಹೃದಯಗಳಲ್ಲಿ ಅವರು ಸದಾ ಜೀವಂತ. ನಗುಮುಖದ ಒಡೆಯನ ಸಿನಿಮಾಗಳು ಪ್ರತೀ ವರ್ಷ ಅವರ ಬರ್ತ್ ಡೇಗೆ ಒಂದೊಂದಾಗಿ ರೀ ರಿಲೀಸ್ ಆಗಲಿವೆ. ಕಳೆದ ವರ್ಷ ಜಾಕಿ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಈ ಬಾರಿ ಅಪ್ಪು ಸಿನಿಮಾನ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.
ಹೌದು.. ಮಾರ್ಚ್ 17ರಂದು ಪುನೀತ್ 50ನೇ ಹುಟ್ಟುಹಬ್ಬ ಇರಲಿದ್ದು, ಅದರ ವಿಶೇಷ ಅಪ್ಪು ಸಿನಿಮಾ ತೆರೆಗಪ್ಪಳಿಸಲಿದೆ. ಸೆಲೆಬ್ರೇಷನ್ ನೆಕ್ಸ್ಟ್ ಲೆವೆಲ್ ಗೆ ಇರಲಿದ್ದು, ಅಭಿಮಾನಿ ದೇವರುಗಳು ಕಟೌಟ್ ಗಳನ್ನ ಹಾಕಿ, ಫಲ, ಪುಷ್ಪಗಳ ಜೊತೆ ಹಾಲಿನ ಅಭಿಷೇಕ ಕೂಡ ಮಾಡಲಿದ್ದಾರೆ. ಪಟಾಕಿ ಸಿಡಿಸಿ, ಹಬ್ಬದ ರೀತಿ ಸಂಭ್ರಮಿಸಲಿದ್ದಾರೆ.
ಇನ್ನು ಅಪ್ಪು ಸಿನಿಮಾದ ರೀ ರಿಲೀಸ್ ಕುರಿತು ಸ್ವತಃ ಪಿಆರ್ ಕೆ ಒಡತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.