ಮಾರ್ಚ್ 17 ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನ. ರಾಜ್ಯದೆಲ್ಲೆಡೆ ಅಭಿಮಾನಿಗಳು ಈ ದಿನವನ್ನು ಹರ್ಷೋದ್ಗಾರದಿಂದ ಆಚರಿಸುತ್ತಿದ್ದಾರೆ. ದಾನ-ಧರ್ಮ, ವಿಶೇಷ ಕಾರ್ಯಕ್ರಮಗಳು ಇತರೆ ಸಾಮಾಜಿಕ ಸೇವೆಗಳ ಮೂಲಕ ಅವರ ಅಭಿಮಾನಿಗಳು ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಸಿನಿಮಾ, ಕ್ರೀಡೆ ಮತ್ತು ಕಲಾಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಇದೀಗ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ದಿವಂಗತ ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ದಿನೇಶ್ ಕಾರ್ತಿಕ್ ಭಾವುಕ ನಮನ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಆರ್‌ಸಿಬಿ ತಂಡದ ಕೋಚ್ ದಿನೇಶ್ ಕಾರ್ತಿಕ್ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕವಾಗಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ, ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ನಾನು ಮೂಲತಃ ಚೆನ್ನೈನವನಾಗಿದ್ದೇನೆ. ನನಗೆ ರಜನಿಕಾಂತ್, ಕಮಲ್ ಹಾಸನ್, ವಿಜಯ್ ಸೇತುಪತಿ, ಅಜಿತ್ ಅವರು ಇಷ್ಟ. ಆದರೆ, ಆರ್‌ಸಿಬಿ ತಂಡದಿಂದಾಗಿ ಮೂರು ವರ್ಷ ಆಡಿದಾಗ, ಇಡೀ ಬೆಂಗಳೂರು ಜನತೆ ಒಬ್ಬ ವ್ಯಕ್ತಿಯನ್ನು ಅತಿ ಹೆಚ್ಚು ಪ್ರೀತಿಸುತ್ತಾರೆ ಎಂದು ತಿಳಿದುಬಂತು. ಅವರು ಯಾರಂದ್ರೆ, ಪುನೀತ್ ರಾಜ್ ಕುಮಾರ್!” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಬೆಂಗಳೂರಿನ ಪ್ರತೀ ಮೂಲೆಯಲ್ಲಿ ಅಪ್ಪು!
“ನಾನು ಬೆಂಗಳೂರಿನ ಪ್ರತೀ ಮೂಲೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋಗಳನ್ನು ನೋಡಿದ್ದೇನೆ. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇದ್ದಾರೆ ಅನ್ಸುತ್ತೆ. ಅಭಿಮಾನಿಗಳು ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತದೆ. ಅವರ ಹುಟ್ಟುಹಬ್ಬದ ದಿನಕ್ಕೆ ನಾನು ಅವರಿಗೆ ನಮನ ಸಲ್ಲಿಸುತ್ತೇನೆ. ಅವರು ಮುಂದಿನ ಪೀಳಿಗೆಗೂ ಸ್ಪೂರ್ತಿಯಾಗಿರುತ್ತಾರೆ” ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡಿರಲಿಲ್ಲ. ಆದರೆ ಈಗ ಅವರ ಅಭಿಮಾನಿಗಳಿಂದ ಅವರಿಗೆ ಉತ್ತಮ ಚಿತ್ರಗಳ ಪರಿಚಯವನ್ನಾಗವಂತೆ ಕೇಳಿಕೊಂಡಿದ್ದಾರೆ.
ಆರ್‌ಸಿಬಿ ವಿಶೇಷ ಕಾರ್ಯಕ್ರಮ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಅಭಿಮಾನಿಗಳಿಗೆ ಹೊಸ ಆಟಗಾರರನ್ನು ಪರಿಚಯಿಸಿದರು. ಇದರಲ್ಲೂ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲಾಯಿತು.
ಈ ವೇಳೆ, ಪುನೀತ್ ನಟನೆಯ “ರಾಜಕುಮಾರ” ಸಿನಿಮಾದ ಗೀತೆ ಹಾಡುವ ಮೂಲಕ, ಬೃಹತ್ ಚಿತ್ರ ಪ್ರದರ್ಶನ ಮತ್ತು ಅನೇಕ ಕಲಾವಿದರು ಪುನೀತ್ ಅವರ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಅವರನ್ನು ಗೌರವಿಸಿದರು. ಅಭಿಮಾನಿಗಳು ಮೊಬೈಲ್ ಟಾರ್ಚ್ ಆನ್ ಮಾಡಿ “ನೀನೇ ರಾಜಕುಮಾರ” ಹಾಡನ್ನು ಹಾಡಿ ವಿಶೇಷ ಗೌರವ ಸಲ್ಲಿಸಿದರು.
ಆರ್‌ಸಿಬಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಅಭಿಮಾನಿಗಳ ಜೊತೆ ಸೇರಿ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿದರು.