ಸಿಂಫೋನಿ ಸ್ವರ ಪ್ರತಿಷ್ಠಾನ ಸಂಸ್ಥೆಯ ಮೂರನೇ ವರ್ಷದ ‘ರಾಜ ಪುನೀತೋತ್ಸವ’ ಸಂಗೀತ ರಸಸಂಜೆ ಹಾಗೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿರುವ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಿತು.
ಕನ್ನಡ ಚಿತ್ರರಂಗದ ಅಮೂಲ್ಯ ರತ್ನಗಳಾದ ಡಾ. ರಾಜ್ ಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅವರ ಸವಿನೆನಪಿನಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪ್ರಣಯರಾಜ ಡಾ.ಶ್ರೀನಾಥ್ ಅವರಿಗೆ ‘ರಾಜ್ ರತ್ನ’ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ.ರವೀಂದ್ರನಾಥ್ ಅವರಿಗೆ ‘ಪುನೀತ್ ರತ್ನ’ ಪ್ರಶಸ್ತಿ
ನೀಡಿ ಗೌರವಿಸಲಾಯಿತು.
ನಟ ಶ್ರೀನಾಥ್ ಇದೇ ಸಂದರ್ಭದಲ್ಲಿ ಹಿರಿಯ ಸಿನಿಮಾ ಪ್ರಚಾರಕರ್ತರಾದ ನಾಗೇಂದ್ರ ಅವರಿಗೆ ಹಾಗೂ ನಟಿ ರೂಪಿಕಾ ಅವರಿಗೂ ಗೌರವ ಸಮರ್ಪಣೆ ಮಾಡಲಾಯಿತು. ನಟ ಶ್ರೀನಾಥ್ ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚಿ ಮಾತನಾಡುತ್ತ ಕಲೆಯನ್ನು, ಕಲಾವಿದರನ್ನು ಬೆಳೆಸುತ್ತಿದ್ದೀರಿ. ಪ್ರತಿಭೆಗಳನ್ನು ಹುಟ್ಟುಹಾಕುವ ನಿಮ್ಮ ಕೆಲಸ ಅಭಿನಂದನಾರ್ಹ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ರಾಜ ಪುನೀತೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ‘ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸಿಂಫೋನಿ ಸ್ವರ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಎಸ್.ಕೆ.ಅನಂತು, ಕಾರ್ಯದರ್ಶಿಗಳಾದ ಸಿಂಫೋನಿ ಶಿವು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.
ಸಂಜೆ ಐದರಿಂದ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ಚಲನಚಿತ್ರಗಳ ನೂರಾರು ಜನಪ್ರಿಯ ಗೀತೆಗಳ ಗಾಯನ ಹಾಗೂ ನೃತ್ಯ ನೆರೆದಿದ್ದ ಕಲಾರಸಿಕರ ಕಣ್ಮನ ತಣಿಸಿದವು.