ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿರುವ ಕಾಂತಾರ1 ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳಲ್ಲಿ ಒಂದಾಗಿದೆ. 2022ರಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದು, ಈಗ ಕಾಂತಾರ 1ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಆದರೆ, ಚಿತ್ರದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೆಲವು ಅಡೆತಡೆಗಳು ಎದುರಾಗಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾಂತಾರ 1ಗೆ ಭಾರೀ ವಿಘ್ನಗಳು ಎದುರಾಗಿವೆಯೇ ಎಂಬ ಸಂಶಯ ಮೂಡಿದೆ.
ರಿಷಬ್ ಶೆಟ್ಟಿಯ ದೈವದ ಬಳಿಗೆ ಭೇಟಿ
ಈ ಸಂಶಯಕ್ಕೆ ಕಾರಣವೂ ಇದೆ. ಇತ್ತೀಚೆಗೆ ಮಂಗಳೂರಿನ ಕದ್ರಿ ಬಾರೆಬೈಲ್‌ನಲ್ಲಿ ನಡೆದ ವಾರಾಹಿ ಪಂಜುರ್ಲಿ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ರಾತ್ರಿ 11 ಗಂಟೆಯಿಂದ ಬೆಳಗಿನಯವರೆಗೆ ನಡೆದ ಈ ದೈವದ ನೇಮದಲ್ಲಿ ರಿಷಬ್ ಶೆಟ್ಟಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಉತ್ಸವದ ಕೊನೆಯಲ್ಲಿ ಪಂಜುರ್ಲಿ ದೈವದ ಮುಂದೆ ಕೈಮುಗಿದು ತಮ್ಮ ನೋವನ್ನು ತೋಡಿಕೊಂಡ ರಿಷಬ್‌ಗೆ ದೈವದಿಂದ ಆಶ್ವಾಸನೆ ಸಿಕ್ಕಿದೆ.
ದೈವ ರಿಷಬ್‌ಗೆ ಸಂತೈಸುತ್ತಾ, “ಜಗತ್ತಿನಾದ್ಯಂತ ನಿನಗೆ ದುಶ್ಮನ್‌ಗಳಿದ್ದಾರೆ. ನಿನ್ನ ಸಂಸಾರವನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲಿಸದಂತೆ ಸಂಚು ರೂಪಿಸಲಾಗಿದೆ. ಆದರೆ, ನೀನು ನಂಬಿದ ದೈವ ನಿನ್ನನ್ನು ಕೈಬಿಡಲ್ಲ,” ಎಂದು ಭರವಸೆ ನೀಡಿದೆ. “ಯಾರು ನಿನಗೆ ಕೇಡು ಯೋಚಿಸಿದ್ದಾರೆ ಎಂದು ಈಗ ಹೇಳಲ್ಲ, ಆದರೆ ಕೇಡು ಆಗದಂತೆ ನಾನು ನೋಡಿಕೊಳ್ಳುತ್ತೇನೆ. ಸೇವೆಗೆ ಹರಕೆ ಹೇಳು, ಐದು ತಿಂಗಳಲ್ಲಿ ಒಳ್ಳೆಯದನ್ನು ಮಾಡುತ್ತೇನೆ,” ಎಂದು ದೈವ ಅಭಯ ನೀಡಿದೆ. ರಿಷಬ್ ಶೆಟ್ಟಿ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.