“ರೋಡೀಸ್ XX”: ಅಲಮೇಲಮ್ಮನ ಶಾಪದ ಸ್ಫೂರ್ತಿಯಿಂದ ಮೈಸೂರಿನಲ್ಲಿ ಥ್ರಿಲ್ಲಿಂಗ್ ಟಾಸ್ಕ್!

Untitled design (93)

ದೇಶದಾದ್ಯಾಂತ್ಯ ಹೆಚ್ಚು ಜನಪ್ರಿಯತೆ ಹೊಂದಿರುವ ಯೂತ್ ಬೇಸ್ಡ್ ಅಡ್ವೆಂಚರ್ ರಿಯಾಲಿಟಿ ಶೋ ಅದು ‘ರೋಡಿಸ್’. ‘ರೋಡೀಸ್: ಡಬಲ್ ಕ್ರಾಸ್’ ಹೆಸರಿನ ಈ ಶೋ ಈಗಾಗಲೇ ಹಲವಾರು ಎಕ್ಸೈಟಿಂಗ್ ಟಾಸ್ಕ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದೆ. MTVಯಲ್ಲಿ ಪ್ರಸಾರವಾಗುತ್ತಿರುವ ರೋಡಿಸ್ XX ಹೊಚ್ಚ ಹೊಸ ಸೀಸನ್‌ ಕರ್ನಾಟಕದಲ್ಲಿ ಪ್ರಾರಂಭವಾಗಿದೆ.  ರೋಡಿಸ್ XX  ಶೋನಲ್ಲಿ ಈವರೆಗೂ ನಡೆದ ಟಾಸ್ಕ್‌ಗಳು ಕರ್ನಾಟಕದಲ್ಲಿ ನಡೆದ ಘಟನೆಗಳಿಂದಲೇ ಸ್ಫೂರ್ತಿ ಪಡೆದಿರೋದು ವಿಶೇಷವಾಗಿದೆ. ಹಂಪಿ, ಚಿತ್ರದುರ್ಗದ ನಂತರ ಈಗ ಮೈಸೂರಿನಲ್ಲಿ ನಡೆಯುತ್ತಿದೆ. ಅಲಮೇಲಮ್ಮನ ಶಾಪದ ಕಥೆಯಿಂದ ಸ್ಫೂರ್ತಿ ಪಡೆದು ಒಂದು ಇಮ್ಯೂನಿಟಿ ಟಾಸ್ಕ್ ರಚನೆಯಾಗಿದೆ. 

ಅಲಮೇಲಮ್ಮನ ಶಾಪ – ಇಮ್ಯೂನಿಟಿ ಟಾಸ್ಕ್‌

16ನೇ ಶತಮಾನದಲ್ಲಿ ಶ್ರೀರಂಗಪಟ್ಟಣದ ಅರಸರ ರಾಜಪತ್ನಿ ಅಲಮೇಲಮ್ಮನ ಶಾಪ ಇಂದಿಗೂ ಜನಪ್ರಿಯ ನಂಬಿಕೆಯಾಗಿದೆ. ಮಾಲಂಗಿ ಎಂಬಲ್ಲಿ ನದಿಗೆ ಹಾರಿದ ಅಲಮೇಲಮ್ಮ, ಮುಳುಗುತ್ತಿರುವಾಗ “ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿದಳು. ಅದಾದ ನಂತರದಿಂದ ಮಾಲಂಗಿ ಪ್ರಾಕೃತಿಕ ಮಡುವಾಗಿಯೇ ಉಳಿದಿದೆ, ತಲಕಾಡು ಮರಳಿನಿಂದ ತುಂಬಿದೆ, ಮತ್ತು ಮೈಸೂರು ಅರಸರ ಕುಟುಂಬಕ್ಕೆ ವೈವಾಹಿಕ ಸಂತಾನಪ್ರಾಪ್ತಿ ಇಲ್ಲ ಎಂಬ ನಂಬಿಕೆ ಇದೆ.

ADVERTISEMENT
ADVERTISEMENT

ಈ ಐತಿಹಾಸಿಕ ಶಾಪದ ಕಥೆಯಿಂದ ಸ್ಫೂರ್ತಿ ಪಡೆದ ‘ರೋಡೀಸ್: ಡಬಲ್ ಕ್ರಾಸ್’ ತಂಡ ಈ ಪೈಕಿ ಒಂದು ಪ್ರಮುಖ ಇಮ್ಯೂನಿಟಿ ಟಾಸ್ಕ್‌ ಅನ್ನು ಸಿದ್ಧಪಡಿಸಿದೆ. ಈ ಟಾಸ್ಕ್‌ನಲ್ಲಿ ‘ರಾಣಿ’ ಬಾಗಿಲು ಮುರಿದು ಮಣ್ಣಿನಲ್ಲಿ ರತ್ನಗಳನ್ನು ಹುಡುಕಬೇಕು ಮತ್ತು ‘ದತ್ತು ಪುತ್ರ’ ಆ ರತ್ನಗಳನ್ನು ಕಿರೀಟದವರೆಗೆ ತಲುಪಿಸಬೇಕು. ಮಧ್ಯದಲ್ಲಿ ಎದುರಾಳಿ ತಂಡಗಳೊಂದಿಗೆ ಕಾದಾಟ ನಡೆಸುವ ಮೂಲಕ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಸ್ಪರ್ಧೆಯಲ್ಲಿ ನೇಹಾ ಧೂಪಿಯಾ ಮತ್ತು ಪ್ರಿನ್ಸ್ ನರುಲಾ ತಂಡಗಳು ಗೆಲುವು ಸಾಧಿಸಿದವು.

ಕರ್ನಾಟಕದಿಂದ ಸ್ಫೂರ್ತಿ ಪಡೆದ ಟಾಸ್ಕ್‌ಗಳು

ಈ ಬಾರಿಯ ‘ರೋಡೀಸ್: ಡಬಲ್ ಕ್ರಾಸ್’ ಶೋ ಸಾಕಷ್ಟು ಕನ್ನಡದ ಐತಿಹಾಸಿಕ ಮತ್ತು ಪೌರಾಣಿಕ ಪ್ರಸಂಗಗಳಿಂದ ಪ್ರೇರಿತವಾಗಿದೆ. ಹಂಪಿಯಲ್ಲಿ ವಾಲಿ – ಸುಗ್ರೀವರ ಯುದ್ಧದಿಂದ ಸ್ಫೂರ್ತಿ ಪಡೆದು ಮೊದಲ ಟಾಸ್ಕ್‌ ಅನ್ನು ರಚಿಸಲಾಯಿತು. ಅದನಂತರ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವನ ಸಾಹಸಗಾಥೆಯಿಂದ ಸ್ಫೂರ್ತಿ ಪಡೆದು ಮತ್ತೊಂದು ಇಮ್ಯೂನಿಟಿ ಟಾಸ್ಕ್ ಅನ್ನು ನಡೆಸಲಾಯಿತು. ಇದೀಗ ಮೈಸೂರಿನ ಪ್ರಸಿದ್ಧ ಅಲಮೇಲಮ್ಮನ ಶಾಪದಿಂದ ಸ್ಫೂರ್ತಿ ಪಡೆದು ಹೊಸ ಟಾಸ್ಕ್‌ ಅನ್ನು ರೂಪಿಸಲಾಗಿದೆ.

ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ ಅಪ್‌ಸೇಲಿಂಗ್ ಟಾಸ್ಕ್‌

ಇದಾದ ಬಳಿಕ ‘ರೋಡೀಸ್’ ತಂಡ ಮೈಸೂರಿನ ಪ್ರಸಿದ್ಧ ದೇವರಾಜ ಮಾರ್ಕೆಟ್‌ನಲ್ಲಿ ಟಾಸ್ಕ್ ನಡೆಸಿತು. ಪ್ರತಿ ಗ್ಯಾಂಗ್‌ಗೆ ಒಂದು ಬಾಳೆಹಣ್ಣು ನೀಡಲಾಗಿದ್ದು, ಅದನ್ನು ಎಕ್ಸ್‌ಚೇಂಜ್‌ ಮಾಡಿ, ಹೆಚ್ಚಿದ ಮೌಲ್ಯದ ವಸ್ತುಗಳನ್ನು ಖರೀದಿಸಬೇಕೆಂಬ ನಿಯಮವನ್ನು ಒದಗಿಸಲಾಯಿತು. ಈ ಟಾಸ್ಕ್‌ ವೇಳೆ ಉತ್ತರ ಭಾರತ ಮೂಲದ ಸ್ಪರ್ಧಿಗಳು ಕನ್ನಡದಲ್ಲಿ ಮಾತಾಡಲು ಪ್ರಯತ್ನಿಸಿದುದು ವಿಶೇಷವಾಗಿತ್ತು. ಸ್ಪರ್ಧಿಗಳು ಅಂಗಡಿ ಮಾಲೀಕರಿಗೆ “ಅಣ್ಣ.. ದಯವಿಟ್ಟು ಅಣ್ಣ.. ಧನ್ಯವಾದಗಳು ಅಣ್ಣ..” ಎಂದು ಕನ್ನಡದಲ್ಲಿ ಮನವಿ ಮಾಡಿದರು. ಸ್ಪರ್ಧಿಗಳು ತಮ್ಮ ನೋಟ್‌ಬುಕ್‌ ತೆಗೆದುಕೊಂಡು ಕನ್ನಡದಲ್ಲಿ ವ್ಯವಹರಿಸಲು ಯತ್ನಿಸಿದ್ದು ಪ್ರೇಕ್ಷಕರನ್ನು ಆಕರ್ಷಿಸಿತ್ತು. ಈ ಟಾಸ್ಕ್‌ನಲ್ಲಿ ಎಲ್ವಿಶ್ ಯಾದವ್ ಗ್ಯಾಂಗ್ ಗೆಲುವು ಸಾಧಿಸಿತು.

ನಾಲ್ಕು ಗ್ಯಾಂಗ್‌ಗಳ ಪ್ರತಿಸ್ಪರ್ಧೆ

‘ರೋಡೀಸ್: ಡಬಲ್ ಕ್ರಾಸ್’ ಶೋನಲ್ಲಿ ನಾಲ್ಕು ಗ್ಯಾಂಗ್‌ಗಳು ಪರಸ್ಪರ ಸ್ಪರ್ಧಿಸುತ್ತಿವೆ. ಈ ಗ್ಯಾಂಗ್‌ಗಳಿಗೆ ನೇಹಾ ಧೂಪಿಯಾ, ಎಲ್ವಿಶ್ ಯಾದವ್, ಪ್ರಿನ್ಸ್ ನರುಲಾ ಹಾಗೂ ರಿಯಾ ಚಕ್ರವರ್ತಿ ಗ್ಯಾಂಗ್ ಲೀಡರ್ಸ್ ಆಗಿದ್ದಾರೆ. ರಣ್‌ವಿಜಯ್ ಸಿಂಗ್ ಶೋ ಹೋಸ್ಟ್ ಆಗಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಕರ್ನಾಟಕದಿಂದ ಇಬ್ಬರು ಸ್ಪರ್ಧಿಗಳು ಭಾಗವಹಿಸಿದ್ದಾರೆ – ಹೀನಾ ಜೈನ್ (ಬೆಂಗಳೂರು) ಹಾಗೂ ರಶ್ಮಿತಾ ಶೆಟ್ಟಿ (ಮಂಗಳೂರು). ಆದರೆ ಹೀನಾ ಜೈನ್ ಈಗಾಗಲೇ ವೋಟ್ ಔಟ್ ಆಗಿದ್ದಾರೆ.

ಕನ್ನಡ ಸಂಸ್ಕೃತಿಯು ‘ರೋಡೀಸ್’ ಶೋನಲ್ಲಿ ವಿಶಿಷ್ಟವಾಗಿ ಅಡಕವಾಗಿದೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಥೆಗಳನ್ನು ಟಾಸ್ಕ್‌ಗಳಲ್ಲಿ ಬಳಸಿ, ಕನ್ನಡದ ಸ್ಥಳೀಯತೆಯನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಈ ಬಾರಿಯ ‘ರೋಡೀಸ್: ಡಬಲ್ ಕ್ರಾಸ್’ ಶೋಗೆ ಒಂದು ವಿಶೇಷ ತಿರುವು ನೀಡಿದೆ.

Exit mobile version