ಚಿತ್ರ ಪ್ರೇಮಿಗಳಿಗೆ ಪುಟ್ಟಿ ಅಂದಾಕ್ಷಣ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೆನಪಾಗುತ್ತೆ. ಯೆಸ್.. ಪುಟ್ಟಿಯಾಗಿ ಮಿಂಚಿದ ರುಕ್ಮಿಣಿ ವಸಂತ್ ಅಪ್ಪಟ ಕನ್ನಡತಿ. 2007ರಲ್ಲಿ ಉರಿಯಲ್ಲಿ ನಡೆದ ಇಂಡಿಯಾ- ಪಾಕಿಸ್ತಾನ್ ಕದನದಲ್ಲಿ ಇಹಲೋಕ ತ್ಯಜಿಸಿದ ಅಶೋಕ ಚಕ್ರ ಗೌರವಕ್ಕೆ ಪಾತ್ರರಾಗಿದ್ದ ಕ್ಯಾಪ್ಟನ್ ವಸಂತ್ ವೇಣುಗೋಪಾಲ್ ರ ಪುತ್ರಿ ಈಕೆ.
ಆರ್ಮಿ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ, ಲಂಡನ್ ನಲ್ಲಿ ಆ್ಯಕ್ಟಿಂಗ್ ಕಲಿತು ಬಂದ ರುಕ್ಮಿಣಿ ವಸಂತ್, 2019ರಲ್ಲಿ ಬೀರಬಲ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಅದಾದ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಭಾಗ-1, ಭಾಗ-2, ಬಾನದಾರಿಯಲ್ಲಿ, ಬಘೀರ, ಭೈರತಿ ರಣಗಲ್ ಹೀಗೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೇ ಒಳ್ಳೊಳ್ಳೆಯ ಸಿನಿಮಾಗಳನ್ನ ಮಾಡಿದ್ರು.
ಈಕೆಯ ಅಂದ, ಚೆಂದ, ವಿನ, ವಿಧೇಯ, ನಟನಾ ಕೌಶಲ್ಯಗಳನ್ನ ಕಂಡಂತಹ ಪರಭಾಷಿಗರು ಬಹುಬೇಗ ರುಕ್ಮಿಣಿಗೆ ರೆಡ್ ಕಾರ್ಪೆಟ್ ಹಾಸಿದ್ರು. ಅಪ್ ಸ್ಟಾರ್ಟ್ಸ್ ಅನ್ನೋ ಹಿಂದಿ ಚಿತ್ರದಲ್ಲಿ ನಟಿಸಿದ ರುಕ್ಮಿಣಿಗೆ ಪಕ್ಕದ ಟಾಲಿವುಡ್ ಕೂಡ ಕರೆದು ಅವಕಾಶ ನೀಡಿತು. ಆಗ ಆಗಿದ್ದೇ ಅಪ್ಪುಡೋ ಇಪ್ಪುಡೋ ಎಪ್ಪುಡೋ ಸಿನಿಮಾ. ಸದ್ಯ ಎರಡು ತಮಿಳು ಸಿನಿಮಾ ಹಾಗೂ ಮತ್ತೊಂದು ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿರೋ ಈ ಚೆಲುವೆ ಕನ್ನಡದ ಕಾಂತಾರ-1ನಲ್ಲೂ ನಾಯಕನಟಿಯಾಗಿ ಅಭಿನಯಿಸುತ್ತಿದ್ದಾರೆ.
ಎಆರ್ ಮುರುಗದಾಸ್ ನಿರ್ದೇಶನದ ಮದರಾಸಿ ಅನ್ನೋ ಶಿವಕಾರ್ತಿಕೇಯನ್ ಚಿತ್ರದಲ್ಲಿ ನಟಿಸ್ತಿರೋ ರುಕ್ಮಿಣಿ ವಸಂತ್, ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ವಿಜಯ್ ಸೇತುಪತಿ ನಟನೆಯ ಏಸ್ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಏಸ್ ಚಿತ್ರದ ಒಂದು ಸಾಂಗ್ ರಿಲೀಸ್ ಆಗಿದ್ದು, ಆ ಲವ್ ಡುಯೆಟ್ ಸಾಂಗ್ ನೋಡಿ ಇಡೀ ಕಾಲಿವುಡ್ ಫಿದಾ ಆಗಿದೆ. ರೊಮ್ಯಾಂಟಿಕ್ ಕ್ರೈಮ್ ಜಾನರ್ ಸಿನಿಮಾ ಇದಾಗಿದ್ದು, ಸೇತುಪತಿ- ರುಕ್ಮಿಣಿ ಕೆಮಿಸ್ಟ್ರಿ ಮಸ್ತ್ ಮ್ಯಾಚ್ ಆಗಿದೆ. ಆರ್ಮುಗ ಕುಮಾರ್ ನಿರ್ದೇಶನದ ಏಸ್ ಮೂವಿ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.
ಇನ್ನು ಪ್ರಶಾಂತ್ ನೀಲ್ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ನಟನೆಯ 31ನೇ ಸಿನಿಮಾಗೂ ನಮ್ಮ ಕನ್ನಡದ ರುಕ್ಕಮ್ಮನೇ ಹೀರೋಯಿನ್. ಅಲ್ಲಿಗೆ ಈಕೆ ಸದ್ಯದಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಭಾರತೀಯ ಚಿತ್ರರಂಗವನ್ನು ಆಳುವ ದಿನಗಳು ಬಹಳ ದೂರ ಉಳಿದಿಲ್ಲ. ಅದೇನೇ ಇರಲಿ, ನಮ್ಮ ಬೆಂಗಳೂರಿನ ಹುಡ್ಗಿ ಹೀಗೆ ಕನ್ನಡದ ಜೊತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋದು ಖುಷಿಯ ವಿಚಾರ. ರುಕ್ಮಿಣಿ ವಸಂತ್ ಸದ್ಯ ನಟಿಸ್ತಿರೋ ಎಲ್ಲಾ ಸಿನಿಮಾಗಳು ದೊಡ್ಡ ಹಿಟ್ ಆಗಲಿ, ಮತ್ತಷ್ಟು, ಮಗದಷ್ಟು ಕಥೆಗಳು ಆಕೆಯ ಮನೆ ಬಾಗಿಲಿಗೆ ಬರುವಂತಾಗಲಿ ಅಂತ ಹಾರೈಸೋಣ.
– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್