ಖ್ಯಾತ ನಟಿ ಸಂಜನಾ ಗಲ್ರಾನಿಯವರಿಗೆ 45 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ರಾಹುಲ್ ತೋನ್ಸೆಗೆ ಬೆಂಗಳೂರಿನ 33ನೇ ಎಸಿಜೆಎಂ ನ್ಯಾಯಾಲಯವು 61.50 ಲಕ್ಷ ರೂಪಾಯಿ ದಂಡ ಮತ್ತು 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಈ ಪ್ರಕರಣ 2018-19ರಲ್ಲಿ ನಡೆದಿದ್ದು, ರಾಹುಲ್ ತೋನ್ಸೆ ಎಂಬಾತ ಸಂಜನಾ ಅವರಿಂದ ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದ.
ರಾಹುಲ್ ತೋನ್ಸೆ, ಇವನನ್ನು ರಾಹುಲ್ ಶೆಟ್ಟಿ ಎಂದೂ ಕರೆಯಲಾಗುತ್ತದೆ, ಬನಶಂಕರಿ 3ನೇ ಹಂತದ ನಿವಾಸಿಯಾಗಿದ್ದಾನೆ. ದಂಡದ ಮೊತ್ತದಲ್ಲಿ 10,000 ರೂಪಾಯಿಯನ್ನು ಕೋರ್ಟ್ ಶುಲ್ಕವಾಗಿ ಕಡಿತಗೊಳಿಸಿ, ಉಳಿದ 61.40 ಲಕ್ಷ ರೂಪಾಯಿಗಳನ್ನು ಸಂಜನಾ ಗಲಾನಿಗೆ ಮರುಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಒಂದು ವೇಳೆ ರಾಹುಲ್ ನಿಗದಿತ ಸಮಯದಲ್ಲಿ ದಂಡ ಪಾವತಿಸಿದರೆ, 6 ತಿಂಗಳ ಜೈಲು ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲದಿದ್ದರೆ, ಶಿಕ್ಷೆಯ ಜೊತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಹುಲ್ ತೋನ್ಸೆ ತಾನು ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ ಎಂದು ಸಂಜನಾ ಅವರಿಗೆ ಹೇಳಿ, ತಾನು ಸೂಚಿಸಿದ ಕಡೆಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗುತ್ತದೆ ಎಂದು ಆಮಿಷ ಒಡ್ಡಿದ್ದ. ಆದರೆ, ಹಣ ಪಡೆದ ಬಳಿಕ ರಾಹುಲ್ ಯಾವುದೇ ಲಾಭಾಂಶ ನೀಡದೆ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಇಂದ್ರಾನಗರ ಠಾಣೆಯಲ್ಲಿ ರಾಹುಲ್ ತೋನ್ಸೆ ಹಾಗೂ ಅವನ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಹುಲ್‌ನ ತಂದೆ ರಾಮಕೃಷ್ಣ ಮತ್ತು ತಾಯಿ ರಾಜೇಶ್ವರಿ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿತ್ತು.