ಖ್ಯಾತ ನಟ ಸೋನು ಸೂದ್ ಅವರ ಪತ್ನಿ ಸೊನಾಲಿ ಸೂದ್ ಅವರ ಕಾರು ಅಪಘಾತಕ್ಕೀಡಾಗಿದೆ. ಈ ದುರ್ಘಟನೆ ಮಾರ್ಚ್ 24ರಂದು ಮುಂಬೈ-ನಾಗಪುರ ಹೆದ್ದಾರಿಯಲ್ಲಿ ಸಂಭವಿಸಿದೆ. ಅಪಘಾತದ ನಂತರ ನಜ್ಜುಗುಜ್ಜಾದ ಕಾರಿನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಕಾರಿನಲ್ಲಿ ಸೊನಾಲಿ ಸೂದ್ ಜೊತೆ ಅವರ ಸಹೋದರಿ ಮತ್ತು ಸಹೋದರಿಯ ಮಗ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಮೂವರಿಗೂ ಗಾಯಗಳಾಗಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. ಸೊನಾಲಿ ಸೂದ್ ಮತ್ತು ಅವರ ಸಹೋದರಿಯ ಮಗನನ್ನು ಕೂಡಲೇ ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರಿಗೂ ತೀವ್ರ ಗಾಯಗಳಾಗಿದ್ದು, ಮುಂದಿನ 48ರಿಂದ 72 ಗಂಟೆಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಸೋನು ಸೂದ್ ಕೂಡ ಅಪಘಾತದ ವಿಷಯ ತಿಳಿದು ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ. ಅಪಘಾತದಲ್ಲಿ ಸೊನಾಲಿ ಸೂದ್ ಅವರ ಸಹೋದರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅಪಾಯ ಇಲ್ಲ ಎಂದು ತಿಳಿದುಬಂದಿದೆ.
ಸೋನು ಸೂದ್ ಅವರ ಕುಟುಂಬದ ಮೇಲೆ ಈ ದುರ್ಘಟನೆ ಆಘಾತ ಉಂಟುಮಾಡಿದೆ. ಲಾಕ್ಡೌನ್ ಸಮಯದಲ್ಲಿ ಸೋನು ಸೂದ್ ಜನತೆಗೆ ಮಾಡಿದ ನೆರವು, ಬಡವರಿಗೆ ಸಹಾಯ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದರು. ಜನರ ಪಾಲಿಗೆ ಅವರು ‘ರಿಯಲ್ ಹೀರೋ’ ಆಗಿದ್ದಾರೆ. ಅವರ ಕುಟುಂಬಕ್ಕೆ ಈ ಅಪಘಾತದ ಆಘಾತವು ಅಭಿಮಾನಿಗಳಿಗೂ ನೋವನ್ನುಂಟುಮಾಡಿದೆ. ಅಪಘಾತದ ಕಾರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.