ಭಾರತದಲ್ಲಿ ಯುವಕರಲ್ಲಿ ಹೃದಯಾಘಾತ ಕೇಸ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದು ದೇಶವನ್ನು ಆತಂಕಕ್ಕೆ ತಳ್ಳಿದೆ. 30 ಮತ್ತು 40 ವರ್ಷದೊಳಗಿನ ಯುವ ಸಮುದಾಯವು ದಿಢೀರ್ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ವಿಶ್ವಾದ್ಯಂತ ಹೃದಯಾಘಾತದಿಂದ ಬಲಿಯಾಗುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಗುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಡಾಕ್ಯೂಮೆಂಟರಿಯೇ ‘ದಿ ಬ್ರೌನ್ ಹಾರ್ಟ್’. ಈ ಡಾಕ್ಯೂಮೆಂಟರಿ ಮೇ 3, 2025ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದರಲ್ಲಿ ವಿಶ್ವದ ಖ್ಯಾತ ಹೃದ್ರೋಗ ತಜ್ಞರು ಮತ್ತು ಬಾಲಿವುಡ್ ನಟ ನಾಸಿರುದ್ದೀನ್ ಷಾ ಕಾಣಿಸಿಕೊಂಡಿದ್ದಾರೆ.
‘ದಿ ಬ್ರೌನ್ ಹಾರ್ಟ್’ ಡಾಕ್ಯೂಮೆಂಟರಿಯ ವಿಶೇಷತೆ
‘ದಿ ಬ್ರೌನ್ ಹಾರ್ಟ್’ ಡಾಕ್ಯೂಮೆಂಟರಿಯು ಭಾರತೀಯ ಯುವ ಸಮುದಾಯವನ್ನು ಕಾಡುತ್ತಿರುವ ಹೃದಯಾಘಾತದ ಸಮಸ್ಯೆಗೆ ಬೆಳಕು ಚೆಲ್ಲುತ್ತದೆ. ಈ ಡಾಕ್ಯೂಮೆಂಟರಿಯನ್ನು ಡಾ.ನಿರ್ಮಲ್ ಮತ್ತು ರೇಣು ಜೋಷಿ ಎಂಬ ಅಮೆರಿಕ ಮೂಲದ ವೈದ್ಯರು ನಿರ್ಮಾಣ ಮಾಡಿದ್ದಾರೆ. ಆರೋಗ್ಯವಾಗಿರುವ ಯುವಕರಲ್ಲಿ ಹೃದಯಾಘಾತ ಏಕೆ ಸಂಭವಿಸುತ್ತದೆ? ಎಂಬ ಪ್ರಶ್ನೆಗೆ ಈ ಡಾಕ್ಯೂಮೆಂಟರಿಯಲ್ಲಿ ವಿವರವಾದ ಉತ್ತರವನ್ನು ನೀಡಲಾಗಿದೆ. ಸುಮಾರು 40 ಮಂದಿ ವೈದ್ಯರು ಈ ಡಾಕ್ಯೂಮೆಂಟರಿಯಲ್ಲಿ ಭಾಗವಹಿಸಿ, ಹೃದಯಾಘಾತಕ್ಕೆ ಕಾರಣವಾದ ಆರೋಗ್ಯ, ಒತ್ತಡ, ಮತ್ತು ಜೀವನಶೈಲಿಯ ಅಂಶಗಳನ್ನು ಚರ್ಚಿಸಿದ್ದಾರೆ.
ಈ ಡಾಕ್ಯೂಮೆಂಟರಿಯಲ್ಲಿ ಭಾರತ, ಅಮೆರಿಕ, ಮತ್ತು ಯುಕೆಯ ಜನಪ್ರಿಯ ವೈದ್ಯರು, ಹೃದಯಾಘಾತದಿಂದ ಬದುಕುಳಿದವರು, ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಸಂದರ್ಶನಗಳಿವೆ. ಇದರ ಜೊತೆಗೆ, ಜನಪ್ರಿಯ ವೈದ್ಯರು ಮತ್ತು ಸಿನಿಮಾ ತಾರೆಯರು ಆರೋಗ್ಯ, ಒತ್ತಡ ಮತ್ತು ಜೀವನಶೈಲಿಯ ಬಗ್ಗೆ ಚರ್ಚಿಸಿದ್ದಾರೆ. ಈ ಡಾಕ್ಯೂಮೆಂಟರಿಯು ಯುವಕರನ್ನು ಎಚ್ಚರಿಸುವ ಗುರಿಯನ್ನು ಹೊಂದಿದ್ದು, ಹೃದಯಾಘಾತದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಿಳಿವಳಿಕೆ ನೀಡುತ್ತದೆ.