ಹಬ್ಬದ ಸೀಸನ್‌‌ನಲ್ಲಿ ಸ್ಟಾರ್‌‌ ವಾರ್ಸ್‌‌..!

ಸಲ್ಲು V/S ಪವನ್ V/S ವಿಕ್ರಂ V/S ಮೋಹನ್‌‌ ಲಾಲ್‌: ನಾಲ್ವರು ಸ್ಟಾರ್‌‌‌‌‌ಗಳಲ್ಲಿ ಗೆಲ್ಲೋದು ಯಾರು..?

Pak (7)

ಈ ಬಾರಿಯ ಯುಗಾದಿ, ರಂಜಾನ್ ಹಬ್ಬಕ್ಕೆ ಸಿನಿ ಪ್ರೇಮಿಗಳಿಗೆ ಖಂಡಿತ ರಸದೌತಣ ಸಿಗ್ತಿದೆ. ವಿವಿಧ ಚಿತ್ರರಂಗಗಳ ನಾಲ್ವರು ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಎರಡು ದಿನದ ಅಂತರದಲ್ಲಿ ತೆರೆ ಕಾಣಲಿವೆ. ಇದರ ಜೊತೆಗೆ ಟಾಲಿವುಡ್‌ನಲ್ಲಿ ಇನ್ನೂ ಎರಡು ಸಿನಿಮಾಗಳು ರಿಲೀಸ್ ಆಗಲಿವೆ. ಸಲ್ಮಾನ್‌ ಅಭಿನಯದ ಸಿಕಂದರ್‌, ಪವನ್‌ ಕಲ್ಯಾಣ್‌ರ ಹರಿಹರ ವೀರಮಲ್ಲು, ವಿಕ್ರಂರ ವೀರ ಧೀರ ಸೂರನ್‌, ಮೋಹನ್‌ ಲಾಲ್‌ರ ಎಲ್‌‌2 ಎಂಪುರನ್ ಚಿತ್ರಗಳು ರಿಲೀಸ್ ಆಗುತ್ತಿವೆ. ಹೀಗಾಗಿ ಹಬ್ಬದ ಸೀಸನ್‌ನಲ್ಲಿ ಯಾವ ಸೂಪರ್ ಸ್ಟಾರ್‌ ಅಭಿನಯದ ಚಿತ್ರ ಗೆಲ್ಲುತ್ತೆ ಎಂಬ ಪ್ರಶ್ನೆ ಉಳಿದಿದೆ.

ಸಾಮಾನ್ಯವಾಗಿ ಸಂಕ್ರಾಂತಿ, ಯುಗಾದಿ, ದಸರಾ, ದೀಪಾವಳಿ, ರಂಜಾನ್‌, ಕ್ರಿಸ್ಮಸ್‌‌‌ಗೆ ಸ್ಟಾರ್‌ ಹೀರೋಗಳ ಚಿತ್ರಗಳು ರಿಲೀಸ್ ಆಗುವುದು ಸರ್ವೆ ಸಾಮಾನ್ಯ. ಕೆಲವೊಮ್ಮೆ ಹಬ್ಬದ ಸಂದರ್ಭಗಳಲ್ಲಿ ಇಬ್ಬರು, ಮೂವರು ಸೂಪರ್‌ ಸ್ಟಾರ್‌‌ಗಳ ಚಿತ್ರಗಳು ರಿಲೀಸ್ ಆಗಿ ಫ್ಯಾನ್‌ ವಾರ್‌‌‌‌‌‌‌‌ ನಡೆಯುವ ಮಟ್ಟಿಗೆ ಹೈಪ್‌ ಕ್ರಿಯೇಟ್ ಮಾಡುತ್ತವೆ. ಟಾಲಿವುಡ್, ಕಾಲಿವುಡ್‌ಗಳಲ್ಲಿ ಒಂದು ಕಾಲಕ್ಕೆ ಬಿಗ್ಗೆಸ್ಟ್‌ ಸ್ಟಾರ್‌‌ ವಾರ್ಸ್‌‌ಗೆ ಹಬ್ಬಗಳು ಆಸ್ಪದ ಮಾಡಿಕೊಡುತ್ತಿದ್ದವು. ಫಾರ್‌ ಎ ಚೇಂಜ್‌ ಈ ಬಾರಿ ನಾಲ್ಕು ವಿಭಿನ್ನ ಚಿತ್ರರಂಗಗಳ ನಾಲ್ವರು ಬಿಗ್ಗರ್‌‌‌ ಸೂಪರ್‌ ಸ್ಟಾರ್ಸ್‌‌ ಒಂದೇ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗುದ್ದಾಟಕ್ಕೆ ಮುಂದಾಗಿದ್ದಾರೆ.

ADVERTISEMENT
ADVERTISEMENT

ಬಾಲಿವುಡ್ ಬ್ಯಾಡ್‌‌ ಬಾಯ್‌ ಸಲ್ಮಾನ್‌‌ ಖಾನ್‌ ಅಭಿನಯದ ಸಿಕಂದರ್ ಚಿತ್ರ ರಂಜಾನ್‌‌ ಉಡುಗೊರೆಯಾಗಿ ವೀಕ್ಷಕರ ಮುಂದೆ ಬರುತ್ತಿದೆ. ಮಾರ್ಚ್‌ 28ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಪ್ರತಿವರ್ಷ ರಂಜಾನ್‌ ಟೈಂನಲ್ಲಿ ಸಲ್ಮಾನ್‌ ಖಾನ್ ಚಿತ್ರಗಳು ರಿಲೀಸ್ ಆಗುವುದು ಪದ್ಧತಿಯಾಗಿದೆ. ಈ ಬಾರಿಯ ರಂಜಾನ್‌ಗೆ ಸಿಕಂದರ್‌ ರಿಲೀಸ್ ಮೂಲಕ ತಮ್ಮ ಫ್ಯಾನ್ಸ್‌‌‌‌ಗೆ ಗಿಫ್ಟ್‌ ಕೊಡಲು ಸಲ್ಲು ಭಾಯ್ ಮುಂದಾಗಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಎ.ಆರ್‌.ಮುರುಗದಾಸ್ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ನಾದಿಯಾದ್‌ವಾಲಾ ಗ್ರಾಂಡ್‌ಸನ್‌ ಎಂಟರ್‌ಟೈನ್‌‌ಮೆಂಟ್‌‌ ಮೂಲಕ ಸಾಜಿದ್ ನಾದಿಯಾದ್‌ವಾಲಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಡುಗಳಿಗೆ ಪ್ರೀತಂ ಸಂಗೀತ ಸಂಯೋಜನೆ ಮಾಡಿದ್ದರೆ, ಸಂತೋಷ್ ನಾರಾಯಣನ್‌‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಜೊತೆಗೆ ಮಗಧೀರ ಚೆಲುವೆ ಕಾಜಲ್ ಅಗರ್‌ವಾಲ್‌ ಕೂಡ ನಟಿಸಿದ್ದಾರೆ.

ಇದು ಬಾಲಿವುಡ್ ಕಥೆಯಾದರೆ, ಅಲ್ಲಿಂದ ಸ್ವಲ್ಪ ಮುಂದಕ್ಕೆ ಎಂದರೆ ಎರಡು ತೆಲುಗು ರಾಜ್ಯಗಳ ಟಾಲಿವುಡ್‌ ಕಡೆಗೆ ಹೋದರೆ ದೊಡ್ಡ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದರಲ್ಲೂ ಆಂಧ್ರ ಡಿಸಿಎಂ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಎರಡು ವರ್ಷಗಳ ಬಳಿಕ ಸಿನಿಮಾ ಫೀಲ್ಡ್‌‌ ಕಂಬ್ಯಾಕ್‌ ಮಾಡೋಕೆ ರೆಡಿಯಾಗಿದ್ದಾರೆ. ಸಿನಿಮಾ ಮತ್ತು ಪಾಲಿಟಿಕ್ಸ್‌ ಎರಡರಲ್ಲೂ ಪವರ್‌ ಸ್ಟಾರ್ ಆಗಿ ಹೊರಹೊಮ್ಮಿರುವ ಪವನ್‌ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಪಾರ್ಟ್‌ ಒನ್‌ ಮಾರ್ಚ್‌ 28ರಂದೇ ರಿಲೀಸ್ ಆಗುತ್ತಿದೆ. ಯುಗಾದಿ ಮತ್ತು ರಂಜಾನ್‌ ರಜೆಗಳನ್ನು ಎನ್‌ಕ್ಯಾಷ್‌ ಮಾಡಿಕೊಳ್ಳಲು ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ. ಮೆಗಾ ಸೂರ್ಯ ಬ್ಯಾನರ್‌‌ನಡಿ ಎ.ಎಂ.ರತ್ನಂ ಚಿತ್ರ ನಿರ್ಮಿಸಿದ್ದಾರೆ. ಕ್ರಿಷ್‌ ಜಾಗರ್ಲಮುಡಿ, ಜ್ಯೋತಿ ಕೃಷ್ಣ ಚಿತ್ರ ನಿರ್ದೇಶಿಸಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ನಿಧಿ ಅಗರ್‌‌ವಾಲ್‌ ಚಿತ್ರದ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರದ ಎರಡು ಸಿಂಗಲ್ಸ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಹೀಗಾಗಿ ಪವನ್ ಕಲ್ಯಾಣ್‌ ನಟನೆಯ ಕಟ್ಟ ಕಡೆಯ ಚಿತ್ರಗಳಲ್ಲಿ ಒಂದಾಗಿರುವ ಈ ಚಿತ್ರದ ಕುರಿತು ಪವನ್‌ ಕಲ್ಯಾಣ್ ಫ್ಯಾನ್ಸ್‌ ಮಾತ್ರವೇ ಅಲ್ಲ ಉಭಯ ತೆಲುಗು ರಾಷ್ಟ್ರಗಳ ಸಿನಿಮಾ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪವನ್‌ ಕಲ್ಯಾಣ್‌‌ರ ಮೊಟ್ಟ ಮೊದಲ ಪಕ್ಕಾ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದೆ. ರಾಷ್ಟ್ರ ಮಟ್ಟದಲ್ಲಿ ಪವನ್‌ ಕಲ್ಯಾಣ್ ಕ್ರೇಜ್‌ ಹೆಚ್ಚಿಸಿಕೊಂಡ ಬಳಿಕ ರಿಲೀಸ್‌ ಆಗುತ್ತಿದ್ದು, ಪವನ್‌ ಕಲ್ಯಾಣ್‌ ಕ್ರೇಜ್‌ಗೆ ಅಗ್ನಿ ಪರೀಕ್ಷೆ ಎದುರಾಗಿದೆ.

ಬಾಲಿವುಡ್‌, ಟಾಲಿವುಡ್ ಕಥೆ ಇದಾದರೆ, ಇನ್ನೊಂಚೂರು ಮುಂದೆ ಹೋಗಿ ಕಾಲಿವುಡ್‌‌‌‌‌‌‌‌‌ನತ್ತ ಇಣುಕಿ ನೋಡಿದರೆ, ಅಲ್ಲೂ ಕೂಡ ಸೂಪರ್‌ ಸ್ಟಾರ್ ಒಬ್ಬರ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿಯಾನ್ ವಿಕ್ರಂರ ವೀರ ಧೀರ ಸೂರನ್‌ ಪಾರ್ಟ್‌ 2 ಚಿತ್ರ ಮಾರ್ಚ್ 27ಕ್ಕೇ ತೆರೆಗೆ ಬರಲಿದೆ. ಈ ಚಿತ್ರದ ಪ್ರೀಕ್ವೆಲ್‌‌ಗೆ ಇನ್ನೂ ಮುಹೂರ್ತವೇ ಆಗಿಲ್ಲ. ಪ್ರೀಕ್ವೆಲ್‌‌ಗಿಂತಾ ಮೊದಲು ಸೀಕ್ವೆಲ್‌ ತೆರೆಗೆ ಬರುತ್ತಿರುವುದರಿಂದ, ಚಿತ್ರದ ಕುರಿತು ಭಾರಿ ನಿರೀಕ್ಷೆಗಳಿವೆ. ಸು ಅರುಣ್‌ ಕುಮಾರ್‌ ಚಿತ್ರದ ಡೈರೆಕ್ಟರ್ ಆಗಿದ್ದು, ಹೆಚ್‌‌ಆರ್‌ ಪಿಕ್ಚರ್ಸ್‌ ಬ್ಯಾನರ್‌ನಡಿ ರಿಯಾ ಶಿಬು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಜಿ.ವಿ.ಪ್ರಕಾಶ್ ಕುಮಾರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಕ್ರಮ್ ಜೊತೆಗೆ ಎಸ್‌.ಜೆ.ಸೂರ್ಯ, ಸೂರಜ್‌ ವೆಂಜರಮೂಡು, ದಸರಾ ವಿಜಯನ್‌, ಸಿದ್ದಿಕಿ ಸ್ಕ್ರೀನ್‌ ಶೇರ್ ಮಾಡುತ್ತಿದ್ದಾರೆ.

ಇದು ಮೂರು ಚಿತ್ರರಂಗಗಳ ಕಥೆಯಾದರೆ, ಮಾಲಿವುಡ್‌‌ನಲ್ಲೂ ಬಿಗ್ಗೆಸ್ಟ್‌ ಸೂಪರ್ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ. ಮಲಯಾಳಂ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಮೋಹನ್‌‌ಲಾಲ್ ಅಭಿನಯದ ಎಲ್‌2 ಎಂಪುರನ್‌ ಸಿನಿಮಾ ಕೂಡ ಮಾರ್ಚ್‌ 27 ರಂದು ರಿಲೀಸ್ ಆಗಲಿದೆ. ಇದು ಮಲಯಾಳಂ ಹಿಟ್‌ ಚಿತ್ರ ಲೂಸಿಫರ್‌‌‌‌‌ ಸಿರೀಸ್‌‌‌‌ನ ಚಿತ್ರವಾಗಿದೆ. ಚಿತ್ರಕ್ಕೆ ಖ್ಯಾತ ನಟ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಕರಾಗಿದ್ದು, ಮೋಹನ್‌ಲಾಲ್‌ ಜೊತೆಗೆ ಪೃಥ್ವಿರಾಜ್‌ ಸುಕುಮಾರನ್, ಮಂಜು ವಾರಿಯರ್, ಟೊವಿನೋ ಥಾಮಸ್, ಅಭಿಮನ್ಯು ಸಿಂಗ್ ಸೇರಿ ದೊಡ್ಡ ತಾರಾಗಣವೇ ಸ್ಕ್ರೀನ್ ಶೇರ್ ಮಾಡುತ್ತಿದೆ. ಲೂಸಿಫರ್‌ ಸಿನಿಮಾ ಟ್ರೆಂಡ್‌ ಸೆಟ್ಟರ್‌ ಆಗಿತ್ತು. ಹೀಗಾಗಿ ಇದೇ ಸಿರೀಸ್‌ನ ಭಾಗವಾಗಿರುವ ಎಲ್‌‌2 ಎಂಪುರನ್ ಸಿನಿಮಾ ಕುರಿತು ಪ್ರೇಕ್ಷಕರು ಭಾರಿ ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್, ಆಶೀರ್ವಾದ್ ಸಿನಿಮಾಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.  ದೀಪಕ್ ರಾಜ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಇಂತಾ ಬಿಗ್ಗೆಸ್ಟ್‌ ಸ್ಟಾರ್‌‌ಗಳ ಜೊತೆಗೆ ಯೂತ್ ಕೂಡ ಕಾಂಪೀಟ್ ಮಾಡಲು ರೆಡಿಯಾಗಿದ್ದಾರೆ. ಟಾಲಿವುಡ್‌ನಲ್ಲಿ ಮಾರ್ಚ್ 28ರಂದು ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದೇ ರಾಬಿನ್‌‌ಹುಡ್‌. ನಿತಿನ್‌, ಶ್ರೀಲೀಲಾ ಅಭಿನಯದ ಈ ಚಿತ್ರ ಕ್ರಿಸ್ಮಸ್‌‌‌ನಂದೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ರಿಲೀಸ್‌ ಮುಂದೂಡಲಾಗಿತ್ತು. ಮೈತ್ರಿ ಮೂವಿ ಮೇಕರ್ಸ್‌ ಸಿನಿಮಾ ನಿರ್ಮಿಸಿದ್ದು, ವೆಂಕಿ ಕುಡುಮುಲು ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್‌ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. ಐದು ಸಿನಿಮಾಗಳು ಸಾಲದು ಎಂಬ ರೀತಿ ಇನ್ನೂ ಒಂದು ಸಿನಿಮಾ ಹಬ್ಬದ ಸೀಸನ್‌ನಲ್ಲಿ ರಿಲೀಸ್‌ ಆಗ್ತಿದೆ. ಸಿತಾರಾ ಎಂಟರ್‌ಟೇನ್‌‌ಮೆಂಟ್ ನಿರ್ಮಿಸಿರುವ ಮ್ಯಾಡ್ ಸ್ಕ್ವೇರ್‌‌‌ ಸಿನಿಮಾ ಮಾರ್ಚ್‌ 29ರಂದು ತೆರೆಗೆ ಬರಲಿದೆ. 2023ರಲ್ಲಿ ರಿಲೀಸ್‌ ಆಗಿದ್ದ ಮ್ಯಾಡ್‌ ಸಿನಿಮಾದ ಸೀಕ್ವೆಲ್ ಆಗಿದ್ದು, ಫುಲ್ ಕಾಮಿಡಿ ಚಿತ್ರವಾಗಿರಲಿದೆ.

ಈ ಬಾರಿಯ ಯುಗಾದಿ ಮತ್ತು ರಂಜಾನ್‌ ಸೀಸನ್‌‌ನಲ್ಲಿ ಈ ಸಿನಿಮಾ ನಟರ ಅಭಿಮಾನಿಗಳು ಅಕ್ಷರಶಃ ಹಬ್ಬವನ್ನು ಎಂಜಾಯ್‌ ಮಾಡಲಿದ್ದಾರೆ. ನಾಲ್ವರು ಬಿಗ್ಗೆಸ್ಟ್‌ ಸೂಪರ್‌ಸ್ಟಾರ್‌ಗಳು, ಒಬ್ಬ ಯೂತ್ ಐಕಾನ್, ಮತ್ತೊಂದು ಹೊಸಬರ ಚಿತ್ರಗಳು ಮೂರು ದಿನದ ಅಂತರದಲ್ಲಿ ರಿಲೀಸ್ ಆಗುತ್ತಿವೆ. ನಾಲ್ವರು ಸೂಪರ್‌ಸ್ಟಾರ್‌ಗಳಲ್ಲಿ ಪವನ್‌ ಕಲ್ಯಾಣ್ ಅಭಿಮಾನಿಗಳಿಗೆ ಈ ಬಾರಿ ಅತಿದೊಡ್ಡದಾಗಿ ಹಬ್ಬದ ಗಿಫ್ಟ್‌ ಸಿಗುತ್ತಿದ್ದು, ಪವರ್‌‌ಸ್ಟಾರ್‌ ಫ್ಯಾನ್ಸ್‌ ಅಕ್ಷರಶಃ ಜಾತ್ರೆಯನ್ನೇ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಆರು ಸಿನಿಮಾಗಳಲ್ಲಿ ಯಾವ ಸಿನಿಮಾ ಗೆಲ್ಲಲಿದೆ ಎಂಬುದು ಚಿತ್ರಗಳು ರಿಲೀಸ್‌ ಆದ ಬಳಿಕ ಗೊತ್ತಾಗಲಿದೆ.

Exit mobile version