1988ರಲ್ಲಿ ಬಿಡುಗಡೆಯಾದ ಹಿಂದಿ ಹಾರರ್ ಚಿತ್ರ ‘ವೀರಾನಾ’ ತನ್ನ ನಾಯಕಿಯ ಮೂಲಕ ರಾತ್ರೋರಾತ್ರಿ ಸಂಚಲನ ಸೃಷ್ಟಿಸಿತು. ಆದರೆ, ಚಿತ್ರದ ಬಿಡುಗಡೆಯ ನಂತರ ಆ ನಾಯಕಿ ನಿಗೂಢವಾಗಿ ಕಣ್ಮರೆಯಾದಳು. ಇದರ ಹಿಂದೆ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಇದ್ದಾನೆ ಎಂಬ ವದಂತಿಗಳು ಹರಡಿವೆ.
35 ವರ್ಷಗಳ ಹಿಂದೆ ಬಿಡುಗಡೆಯಾದ ‘ವೀರಾನಾ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿತು. ರಾಮ್ಸೆ ಬ್ರದರ್ಸ್ ನಿರ್ಮಿಸಿದ ಈ ಚಿತ್ರ ಕೇವಲ 45 ಲಕ್ಷ ರೂ. ಬಜೆಟ್‌ನಲ್ಲಿ ತಯಾರಾಗಿ 2.7 ಕೋಟಿ ರೂ. ಗಳಿಸಿತು. ಚಿತ್ರದ ನಾಯಕಿ ಜಾಸ್ಮಿನ್ ಈ ಚಿತ್ರದ ಮೂಲಕ ಒಂದೇ ರಾತ್ರಿಯಲ್ಲಿ ಜನಪ್ರಿಯಳಾದಳು.
ಜಾಸ್ಮಿನ್‌ನ ಮೊದಲ ಚಿತ್ರ ‘ಸರ್ಕಾರಿ ಮೆಹ್ಮಾನ್’ ಆಗಿದ್ದರೂ, ಅದು ಆಕೆಗೆ ಗಮನಾರ್ಹ ಖ್ಯಾತಿಯನ್ನು ತಂದುಕೊಡಲಿಲ್ಲ. ಆದರೆ, ‘ವೀರಾನಾ’ದಲ್ಲಿನ ಆಕೆಯ ಬೋಲ್ಡ್ ದೃಶ್ಯಗಳು ಆಕೆಯನ್ನು ವಿಶ್ವಾದ್ಯಂತ ಪ್ರಸಿದ್ಧಗೊಳಿಸಿದವು. ಜನರು ಆಕೆಯ ಸೌಂದರ್ಯಕ್ಕೆ ಮಾರುಹೋಗಿದ್ದರು. ಆದರೆ, ‘ವೀರಾನಾ’ ಬಿಡುಗಡೆಯಾದ ನಂತರ ಜಾಸ್ಮಿನ್ ಇದ್ದಕ್ಕಿದ್ದಂತೆ ಕಣ್ಮರೆಯಾದಳು. ಆಕೆ ಎಲ್ಲಿಗೆ ಹೋದಳು ಎಂಬುದು ಯಾರಿಗೂ ತಿಳಿಯಲಿಲ್ಲ. ಈ ಘಟನೆಯ ಹಿಂದೆ ದಾವೂದ್ ಇಬ್ರಾಹಿಂ ಇದ್ದಾನೆ ಎಂಬ ಊಹಾಪೋಹಗಳು ಹರಡಿದವು.
‘ವೀರಾನಾ’ ಚಿತ್ರೀಕರಣ 1985ರಲ್ಲಿ ಆರಂಭವಾಗಿ 1987ರ ಹೊತ್ತಿಗೆ ಪೂರ್ಣಗೊಂಡಿತು. ರಾಮ್ಸೆ ಬ್ರದರ್ಸ್‌ನ ಹಿಂದಿನ ಚಿತ್ರಗಳು ಸೆನ್ಸಾರ್ ಮಂಡಳಿಯ ಕಠಿಣ ನಿಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದವು. ಆದರೆ, ‘ವೀರಾನಾ’ಗೆ ಸೆನ್ಸಾರ್ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಚಿತ್ರದ 46 ಬೋಲ್ಡ್, ಸೆಕ್ಸೀ, ಮತ್ತು ಹಿಂಸಾತ್ಮಕ ದೃಶ್ಯಗಳಿಗೆ ಮಂಡಳಿ ತಕರಾರು ಎತ್ತಿತು. ಈ ದೃಶ್ಯಗಳನ್ನು ತೆಗೆದುಹಾಕದೆ ಅಥವಾ ಮಾರ್ಪಡಿಸದೆ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗದು ಎಂದು ರಾಮ್ಸೆ ಬ್ರದರ್ಸ್‌ಗೆ ತಿಳಿಸಲಾಯಿತು. ಇದರಿಂದ ಚಿತ್ರವನ್ನು ಮರು ಚಿತ್ರೀಕರಣ ಮಾಡಿ, 8 ತಿಂಗಳ ಕಾಲ ಸ್ಥಗಿತಗೊಂಡಿದ್ದ ‘ವೀರಾನಾ’ 1988ರಲ್ಲಿ 46 ಬದಲಾವಣೆಗಳೊಂದಿಗೆ ಬಿಡುಗಡೆಯಾಯಿತು.
‘ವೀರಾನಾ’ ಬಳಿಕ ಜಾಸ್ಮಿನ್ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆಕೆಯ ಕಣ್ಮರೆಯ ಬಗ್ಗೆ ಹಲವು ವದಂತಿಗಳು ಹರಡಿದವು. ಒಂದು ವದಂತಿಯ ಪ್ರಕಾರ, ‘ವೀರಾನಾ’ದಲ್ಲಿ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆಕೆಯ ವೃತ್ತಿಜೀವನದ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರಿತು. ಮತ್ತೊಂದು ಗಾಸಿಪ್ ಪ್ರಕಾರ, ಚಿತ್ರದಲ್ಲಿ ಜಾಸ್ಮಿನ್‌ನ ಸೌಂದರ್ಯವನ್ನು ಕಂಡ ದಾವೂದ್ ಇಬ್ರಾಹಿಂ ಆಕೆಯನ್ನು ಪಡೆಯಲು ಹವಣಿಸಿದ. ಆತನ ಸಹಚರರು ಜಾಸ್ಮಿನ್ ಮೇಲೆ ಒತ್ತಡ ಹೇರಲು ಆರಂಭಿಸಿದರು.
ದಾವೂದ್‌ನ ಕಾಟಕ್ಕೆ ತತ್ತರಿಸಿದ ಜಾಸ್ಮಿನ್ ಮನೆಯಿಂದ ಹೊರಗೆ ಬರದಿರಲು ನಿರ್ಧರಿಸಿದಳು. ಆದರೆ, ದಾವೂದ್ ಆಕೆಯನ್ನು ಹಿಂಬಾಲಿಸುವುದನ್ನು ನಿಲ್ಲಿಸಲಿಲ್ಲ. ಈ ಒತ್ತಡವನ್ನು ಸಹಿಸಲಾಗದೆ, ಜಾಸ್ಮಿನ್ ಭಾರತವನ್ನು ಬಿಟ್ಟು ಅಮೆರಿಕಕ್ಕೆ ತೆರಳಿದಳು ಎನ್ನಲಾಗಿದೆ. 1990ರ ದಶಕದ ಕೆಲವು ವರದಿಗಳು ಆಕೆ ಗುಟ್ಟಾಗಿ ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದಾಳೆ ಎಂದು ತಿಳಿಸಿದ್ದವು. ಆದರೆ, ಆಕೆ ಅಮೆರಿಕದಲ್ಲಿದ್ದಾಳೆ ಎಂಬುದಕ್ಕೆ ಯಾವುದೇ ದೃಢ ಪುರಾವೆಗಳಿಲ್ಲ. ಜಾಸ್ಮಿನ್ ಜೀವಂತವಾಗಿದ್ದಾಳೆಯೇ ಅಥವಾ ಇಲ್ಲವೇ ಎಂಬುದೂ ಇಂದಿಗೂ ರಹಸ್ಯವಾಗಿಯೇ ಉಳಿದಿದೆ.