ಮೈಸೂರು: ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ ಎಂದು ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿಂದು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಹೆಚ್.ಡಿ ಕೋಟೆಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಹೆಚ್.ಡಿ.ಕೋಟೆಯಲ್ಲಿ 443 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯ ಉದ್ಘಾಟಿಸಿ, ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದೇವೆ. ರಾಜ್ಯ ಸರ್ಕಾರದ ಬಳಿ ಸಂಬಳ ಕೊಡಲು, ಅಭಿವೃದ್ಧಿಗೆ ಹಣ ಇಲ್ಲ ಬಿಜೆಪಿಯವರು ಹಸಿ ಸುಳ್ಳು ಹರಡಿಸುತ್ತಾರೆ. ನಮ್ಮಲ್ಲಿ ಹಣ ಇಲ್ಲದಿದ್ದರೆ ಈ 443 ಕೋಟಿ ಎಲ್ಲಿಂದ ಬಂತು? ಯಾವುದಾದರೂ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ನಿಂತಿದೆಯಾ? ಎಂದು ಪ್ರಶ್ನಿಸಿದರು.
ರಾಜ್ಯದ ಕೋಟಿ ಕೋಟಿ ಫಲಾನುಭವಿಗಳು ನಮ್ಮ ಐದೂ ಗ್ಯಾರಂಟಿ ಯೋಜನೆಗಳ ಫಲವನ್ನು ಪ್ರತೀ ತಿಂಗಳೂ ಪಡೆಯುತ್ತಿದ್ದಾರೆ. ಆದರೂ ಬಿಜೆಪಿಯವರು ಗ್ಯಾರಂಟಿ ಯೋಜನೆಗಳಿಗೂ ಹಣ ಇಲ್ಲ ಎಂದು ಸುಳ್ಳು ಹರಡಿಸುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವರು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಇದನ್ನು ಭಾರತದಲ್ಲಿ ಬೇರೆ ಯಾವ ಸರ್ಕಾರವೂ ಕೊಟ್ಟಿರಲಿಲ್ಲ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಒಂದು ಪೈಸೆ ಕೂಡ ಕಡಿಮೆ ಆಗದಂತೆ ಕೊಡಲಾಗುವುದು. ಪರಿಶಿಷ್ಠ ವರ್ಗದ ಮಂತ್ರಿಯಾಗಿದ್ದ ನಾಗೇಂದ್ರ ಅವರ ಮೇಲೂ ಸುಳ್ಳು ಕೇಸು ಹಾಕಿದ್ದರು. ಈಗ ನಾಗೇಂದ್ರ ಅವರು ಜೈಲಿನಿಂದ ಹೊರಗೆ ಬಂದಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಒಳ್ಳೆ ತೀರ್ಮಾನ ಮಾಡ್ತೀನಿ ಎಂದರು.
ಇದನ್ನು ಓದಿ : ಬಾಹುಬಲಿ ಕಟ್ಟಪ್ಪ ಸತ್ಯರಾಜ್ ‘ಹೆಂಡತಿ ಕೋಮಾದಲ್ಲಿ’!
ನಮ್ಮ ಗ್ಯಾರಂಟಿಗಳಿಂದ ಅನುಕೂಲ ಪಡೆದವರು ನಮಗೆ ಮತ ಕೊಡಲಿ, ಬಿಡಲಿ ಆದರೆ ನಾವು ಬಡವರ ಕಲ್ಯಾಣಕ್ಕೆ ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಬಡವರ ಪರ ಕೆಲಸ ಮಾಡುವುದು ನಮ್ಮ ಬದ್ಧತೆ ಎಂದರು.
ವಾಲ್ಮೀಕಿ ಸಂಘದ ಬೇಡಿಕೆಯಂತೆ ಹೆಚ್.ಡಿ.ಕೋಟೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದರು.