ಸುಪ್ರೀಂ ಕೋರ್ಟಿನ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ 3464 ಕೋಟಿ ರೂ. ಬರ ಪರಿಹಾರ ನೀಡುತ್ತಿದ್ದು, ಇದು ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಕಾಲು ಭಾಗವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಕಲಬುರಗಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ರಾಜ್ಯ 18,172 ಕೋಟಿ ರೂ. ಪರಿಹಾರ ಕೇಳಿದ್ದೇವೆ, 35 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದ್ದು, 48 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಮಂತ್ರಿ ನಿರ್ಮಲಾ ಸೀತಾರಾಂ ಅವರು ರಾಜ್ಯ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಸುಳ್ಳು ಹೇಳಿದ್ದಾರೆ ಎಂದರು.
ಆಮೇಲೆ ನಿರ್ಮಲಾ ಸೀತಾರಾಮನ್ ಅವರು ಇವರು ಬರಗಾಲಕ್ಕೆ ಮನವಿ ಕೊಟ್ಟಿಲ್ಲ, ಗ್ಯಾರಂಟಿಗಳಿಗೆ ಹಣ ಕೇಳಿದ್ದಾರೆ ಎಂದರು. ನಾವು ಗ್ಯಾರಂಟಿಗಳಿಗೆ ಒಂದು ಪೈಸವೂ ಕೇಳಿಲ್ಲ, ಕೇಳೋದೂ ಇಲ್ಲ. ಇಬ್ಬರೂ ಸುಳ್ಳು ಹೇಳಿದರು ಎಂದು ಸ್ಪಷ್ಟ ಪಡಿಸಿದರು. ʼನಾನು ಡಿಸೆಂಬರ್ 19 ರಂದು ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ಅವರ ಗಮನಕ್ಕೆ ತಂದು, 18172 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿದ್ದು, ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆನು. ಅದಕ್ಕೆ ಅವರು ಕೂಡಲೇ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ನುಡಿದರು.
ಡಿಸೆಂಬರ್ 20 ರಂದು ಅಮಿತ್ ಷಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23 ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ಕರೆದು ತೀರ್ಮಾನ ಮಾಡುವುದಾಗಿ ತಿಳಿಸಿದರು. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ ತೀರಾ ಕಡಿಮೆ ಪರಿಹಾರ ಒದಗಿಸಿದ್ದಾರೆ. ನಾವು 18174 ಕೋಟಿ ಕೇಳಿದರೆ ಅವರು 3454 ಕೋಟಿ ಕೊಟ್ಟಿದ್ದಾರೆ. ಅತ್ಯಂತ ಕಡಿಮೆಯಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು” ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ಮುಂದೆ ರಿಟ್ ಪೆಟಿಷನ್ ಹಾಕಿದಾಗ ಭಾರತ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮತ್ತು ಸಾಲಿಟಿಸಿಟರ್ ಜನರಲ್ ಹಾಜರಾದರು. ಅವರು ನಿರ್ಮಲಾ ಸೀತಾರಾಮನ್ ಹೇಳುವ ಮಾತುಗಳಾಗಲಿ, ಅಮಿತ್ ಷಾ ಹೇಳುವ ಮಾತುಗಳನ್ನಾಗಲಿ ಸಲ್ಲಿಸಿಲ್ಲ. ಅವರು ಹೇಳಿದ್ದು ನಿಜವೇ ಆಗಿದ್ದರೆ ಅವರ ಹೇಳಿಕೆಗಳನ್ನು ಹೇಳಲಿಲ್ಲ. ಸುಪ್ರೀಂ ಕೋರ್ಟ್ ಅವರಿಗೆ ರಾಜ್ಯ ಸರ್ಕಾರಗಳು ಇಂತಹ ವಿಚಾರಗಳಲ್ಲಿ ಕೋರ್ಟ್ ಮೊರೆ ಹೋಗುವುದು ಸರಿ ಇಲ್ಲ. ಈ ವಿಷಯವನ್ನು ಬೇಗನೆ ಇತ್ಯರ್ಠ ಮಾಡಿ ಎಂದು ಹೇಳಿದ್ದಕ್ಕೆ ಅವರು ಎರಡು ವಾರಗಳ ಸಮಯಾವಕಾಶ ಕೇಳಿದ್ದರು. ಎರಡು ವಾರವಾದ ಮೇಲೆ ಇನ್ನೂ ಒಂದು ವಾರ ಸಮಯ ಕೇಳಿದ್ದಾರೆ. ಈಗ 28ಕ್ಕೆ ಪ್ರಕರಣ ವಿಚಾರಣೆಗೆ ಬರಲಿದೆ. ಈ ನಡುವೆ ಕೇಂದ್ರ ಸರ್ಕಾರ 3454 ಕೋಟಿ ಕೊಟ್ಟಿದ್ದಾರೆ. ನಾವು ಕೇಳಿದ ಮೊತ್ತದ ನಾಲ್ಕನೇ ಒಂದು ಭಾಗಕ್ಕಿಂತಲೂ ಕಡಿಮೆಯಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.