ಕೊಳ್ಳೇಗಾಲದಲ್ಲಿ ನಡೆದ ಕರಿಮಣಿ ಸೀರಿಯಲ್ ಸಂತೆ ಡಿಸೆಂಬರ್ ೧೫ ರಂದು, ಸಂಜೆ ಆರು ಗಂಟೆಗೆ, ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಸೀರಿಯಲ್ ಸಂತೆ ಎನ್ನುವುದು ಬರೀ ಒಂದು ರಂಜನೆಯಷ್ಟೇ ಅಲ್ಲದೆ ನಟ ನಟಿಯರು ಮತ್ತು ವೀಕ್ಷಕರ ನಡುವಿನ ಬಂಧವನ್ನು ಸಂಭ್ರಮಿಸುವ ಒಂದು ಅವಕಾಶವೂ ಹೌದು. ರಾಜ್ಯದ ಬೇರೆ ಬೇರೆ ಊರುಗಳಲ್ಲಿ ನಡೆದಿರುವ ಈ ಸಂಭ್ರಮ, ಇದೇ ಮೊದಲು ಕೊಳ್ಳೇಗಾಲದಲ್ಲಿ ನಡೆದಿದೆ.
ಸದ್ಯಕ್ಕೆ ಕರಿಮಣಿ ಸೀರಿಯಲ್ 200 ¬ಎಪಿಸೋಡ್ಗಳತ್ತ ದಾಪುಗಾಲು ಇಟ್ಟಿದೆ. ಇದೇ ಖುಷಿಯಲ್ಲಿ ಕೊಳ್ಳೇಗಾಲದಲ್ಲಿಸೀರಿಯಲ್ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಭಿಮಾನಿಗಳು ಅಷ್ಟೇ ಕರಿಮಣಿ ಸೀರಿಯಲ್ ತಂಡಕ್ಕೆ ಅದ್ದೂರಿ ಸ್ವಾಗತವನ್ನು ಕೋರಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ‘ಕರಿಮಣಿ’ ಧಾರಾವಾಹಿಯ ಜನಪ್ರಿಯ ತಾರೆಯರೆಲ್ಲ ಈ ಸಂತೆಯಲ್ಲಿ ಭಾಗವಹಿಸಿ, ತಮಗೆ ಯಶಸ್ಸು ನೀಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಕರಿಮಣಿ ತಂಡವು ಹಲವು ಕಣ್ಣು ಕೋರೈಸುವ ಅಮೋಘ ನೃತ್ಯಗಳ ಮೂಲಕ ಕಾರ್ಯಕ್ರಮಕ್ಕೆ ಸೊಬಗನ್ನು ಹೆಚ್ಚಿಸಿದ್ದಾರೆ.
ಮೋಜಿನ ಸ್ಕಿಟ್ಟುಗಳು, ಮನ ಕಲಕುವ ಮಾತುಕತೆಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಸಾಹಿತ್ಯ, ಕರ್ಣರ ಅನನ್ಯ ಪ್ರೀತಿಯಿಂದ, ಸಿಂಚನಾಳ ಸಾಟಿಯಿಲ್ಲದ ಮಿಂಚಿನ ತನಕ, ಸೀರಿಯಲ್ ಸಂತೆ ಕಾರ್ಯಕ್ರಮವು ಜನರ ಮನಸೂರೆಗೊಳಿಸಿತು. ಭರತ್, ಅರುಂಧತಿ, ವನಜಾ, ಸ್ವರೂಪ್, ನಳಿನಿ, ವೆಂಕಟೇಶ್, ರಾಜೇಂದ್ರ, ಪ್ರಸನ್ನ, ಅದ್ವೈತ್ ಹೀಗೆ ಕರಿಮಣಿ ಧಾರಾವಾಹಿಯ ಎಲ್ಲ ಪಾತ್ರಗಳೂ ವೀಕ್ಷಕರನ್ನು ರಂಜಿಸಿದರು.
ಕರಿಮಣಿ ತಂಡದ ಸೊಗಸುಗಾರರಿಗೆ ಸ್ಪರ್ಧೆಯೊಡ್ಡುವಂತೆ ಗಿಚ್ಚಿಗಿಲಿಗಿಲಿ ತಂಡವೂ ಕೊಳ್ಳೆಗಾಲವನ್ನು ನಗೆಗಡಲಿನಲ್ಲಿ ತೇಲಿಸಿತು. ವಿನೋದ್ ಗೊಬ್ಬರಗಾಲ, ಪ್ರಶಾಂತ್, ಅಮೃತಾ, ತುಕಾಲಿ ಸಂತೋಷ್ ಮತ್ತು ನಂದೀಶ ತಮ್ಮ ವಿಭಿನ್ನ ಮಾತುಗಳಿಂದ ವೀಕ್ಷಕರಿಗೆ ನಗುವಿನ ಕಚಗುಳಿಯಿಟ್ಟರು. ನಿರೂಪಕರಾಗಿ ಇನ್ನಷ್ಟು ಹುರುಪು ತುಂಬಿದವರು, ನಿಮ್ಮ ಪ್ರೀತಿಯ ನಿರಂಜನ್ ದೇಶಪಾಂಡೆ. ನಿರಂಜನ್ ಅವರ ಪಂಚ್ ಲೈನುಗಳಿಂದ ಮನರಂಜನೆ ಮತ್ತೊಂದು ಮಜಲಿಗೆ ಏರಿತು.
ಹೀಗೆ ಚೆಂದದ ನೃತ್ಯಗಳು, ನಕ್ಕು ಅಳಿಸುವ ಮಾತುಕತೆಗಳಿಂದ ತುಂಬಿದ ಒಂದು ವರ್ಣರಂಜಿತ ಸಂಜೆ ಕೊಳ್ಳೆಗಾಲವನ್ನು ರಂಜಿಸಿತು.