ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸಚಿವರಿಗೆ ದೇಶದ ಸುರಕ್ಷತೆ, ಭದ್ರತೆ ಮತ್ತು ನಾಗರಿಕ ಸಮಾಜದ ಬಗ್ಗೆ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಬೆಂಗಳೂರಿನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶ್ವತ್ಥನಾರಾಯಯಣ, ಕಾಂಗ್ರೆಸ್ಸಿಗರು ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ. ಓಲೈಕೆ ಮಾಡುವುದು ಇವರ ಚಾಳಿ ಎಂದು ಟೀಕಿಸಿದರು. ಬಿಜೆಪಿ ಒತ್ತಾಯದ ಬಳಿಕ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಪ್ರಕರಣವನ್ನು ತುಂಬ ದಿನಗಳ ಬಳಿಕ ಎನ್ಐಎಗೆ ಹಸ್ತಾಂತರ ಮಾಡಿದ್ದಾರೆ ಎಂದರು. ಬಿಜೆಪಿಗೆ ಸ್ಫೋಟದ ಜೊತೆ ಸಂಬಂಧ ಇದೆ ಎಂದು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದರು. ಎನ್ಐಎಯವರು ಸಾಕ್ಷಿಯಾಗಿ ಪರಿಗಣಿಸಿದ ಕುರಿತು ವಿವರಣೆ ನೀಡಿದರು. ಕಾಂಗ್ರೆಸ್ಸಿನವರಿಗೆ ಪ್ರತಿ ಹಂತದಲ್ಲೂ ತನಿಖೆಯ ದಾರಿ ತಪ್ಪಿಸುವುದು ಚಾಳಿ. ಡಿ.ಕೆ.ರವಿ ಸಾವಿನ ಪ್ರಕರಣದಿಂದ ರಾಮೇಶ್ವರಂ ಕೆಫೆ ಪ್ರಕರಣದ ವರೆಗೆ ಪ್ರಾರಂಭದಲ್ಲಿ ಇವರೇ ತೀರ್ಮಾನ ಮಾಡುತ್ತಾರೆ ಅಂತ ಕಿಡಿಕಾರಿದ್ರು.
ಇದು ಉದ್ಯಮಗಳ ನಡುವಿನ ದ್ವೇಷದ ಘಟನೆಯಲ್ಲ; ಆರೋಪಿಗಳಿಗೆ ಐಸಿಸ್, ಭಯೋತ್ಪಾದನಾ ಸಂಘಟನೆಗಳ ಜೊತೆ ಲಿಂಕ್ ಇರುವುದು ಗೊತ್ತಾಗಿದೆ. ಆರೋಪಿಗಳು ಪಶ್ಚಿಮ ಬಂಗಾಲದಲ್ಲಿ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರು ಎಂದೂ ತಿಳಿದುಬಂದಿದೆ. ಕರ್ನಾಟಕ ಮತ್ತು ಬೆಂಗಳೂರನ್ನು ಭಯೋತ್ಪಾದನಾ ಚಟುವಟಿಕೆಯ ಕೇಂದ್ರ ತಾಣವಾಗಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಪಶ್ಚಿಮ ಬಂಗಾಲ, ತಮಿಳುನಾಡು ಸೇರಿ ಇಂಡಿ ಒಕ್ಕೂಟ ಅಧಿಕಾರ ಇರುವಲ್ಲಿ ಇಂಥವರಿಗೆ ಇರಲು ಅವಕಾಶ ಕೊಡುತ್ತಿದ್ದಾರೆ. ಅಲ್ಲದೆ ವಿವಿಧ ದಾಖಲೆಪತ್ರ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ರಾಜ್ಯದ ಸುರಕ್ಷತೆ ಬಗ್ಗೆ ನಿಮ್ಮ ಜವಾಬ್ದಾರಿ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಮತ್ತು ಗೃಹಸಚಿವರು ತಿಳಿಸಬೇಕಿದೆ ಎಂದು ಆಗ್ರಹಿಸಿದರು. ರಾಷ್ಟ್ರದ ಸುರಕ್ಷತೆ ಸಂಬಂಧ ರಾಜ್ಯ ಸರಕಾರದ ಜವಾಬ್ದಾರಿ ಏನೆಂದು ತಿಳಿಸಲು ಒತ್ತಾಯಿಸಿದರು.