ಬೆಂಗಳೂರು: ಶೋಭಾ ಕರಂದ್ಲಾಜೆಯವರು 2.5 ಲಕ್ಷದಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧ್ವಜವನ್ನು ನೀಡಿ ಅಖಂಡ ಶ್ರೀನಿವಾಸಮೂರ್ತಿಯವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಚುನಾವಣೆ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿಯವರ ಸೇರ್ಪಡೆ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಂತಾಗಿದೆ ಎಂದು ನುಡಿದರು. ಡಿಜೆ ಹಳ್ಳಿ- ಕೆಜಿ ಹಳ್ಳಿ ಹಿಂದೂ ಮುಸ್ಲಿಂ ಗಲಾಟೆ ಆದಾಗ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯನ್ನು ಸುಡಲಾಗಿತ್ತು. ಆಗ ಕಾಂಗ್ರೆಸ್ನವರು ಬೆಂಬಲ ಕೊಡಲಿಲ್ಲ. ನಾವು ಆಗ ಶ್ರೀನಿವಾಸಮೂರ್ತಿ ಅವರ ಜೊತೆ ಗಟ್ಟಿಯಾಗಿ ನಿಂತಿದ್ದೆವು ಎಂದು ನೆನಪಿಸಿದರು. ಬೆಂಬಲಿಗರ ಜೊತೆ ಅಖಂಡ ಶ್ರೀನಿವಾಸಮೂರ್ತಿಯವರ ಪಕ್ಷ ಸೇರುವಿಕೆಯಿಂದ ಆನೆ ಬಲ ಬಂದಂತಾಗಿದೆ. ಅವರಿಗೆ ನಿಮ್ಮೆಲ್ಲರ ಪರವಾಗಿ ಸ್ವಾಗತ ಎಂದು ತಿಳಿಸಿದರು. ಇಂಥ ವಿಶೇಷ ಸಂದರ್ಭದಲ್ಲಿ ಉಪಸ್ಥಿತರೆಲ್ಲರಿಗೆ ವಂದನೆಗಳು ಎಂದು ತಿಳಿಸಿದರು. ಜಿಲ್ಲಾ ಅಧ್ಯಕ್ಷ ಹರೀಶ್ ಅವರು ಮಾತನಾಡಿ, ಧರ್ಮ- ಅಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಖಂಡ ಶ್ರೀನಿವಾಸಮೂರ್ತಿ ಅವರು ಧರ್ಮದ ಪರವಾಗಿ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದರು.