ಬೆಂಗಳೂರು : ಸುಪ್ರೀಂ ಕೋರ್ಟ್ನಿಂದ ತಪರಾಕಿ ಹಾಕಿಸಿಕೊಂಡು, ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಡೆ ಸಿಡಿದೆದ್ದಿದೆ. ಕೇಂದ್ರ ಸರ್ಕಾರ 3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಇದು ರಾಜ್ಯದ ಬೇಡಿಕೆಯನ್ನು ಪೂರೈಸಲು ಮೊತ್ತವಲ್ಲ. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಬಹಳ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿ ಶಾಸಕರು ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮೇ 7ರಂದು ನಡೆಯಲಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲು ನಿನ್ನೆ ರಾತ್ರಿಯೇ ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಈ ಮಧ್ಯೆ ಪ್ರಧಾಇ ಮೋದಿ ವಿರುದ್ಧವೇ ಮತ್ತೆ ಪರಿಹಾರ ಬಾಣ ಬಿಟ್ಟಿರೋ ಕಾಂಗ್ರೆಸ್, ಬಿಜೆಪಿಗೆ ಮುಜುಗರ ಸೃಷ್ಟಿ ಮಾಡಿದೆ.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಎನ್ ಡಿಆರ್ ಎಫ್ ನಿಂದ ಪರಿಹಾರ ಕೊಡಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ನಾವು ಭಿಕ್ಷೆ ಕೇಳುತ್ತಿಲ್ಲ, ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬರಗಾಲದಿಂದ ನಷ್ಟ ಆಗಿದೆ. 35 ಸಾವಿರ ಕೋಟಿಗೂ ಹೆಚ್ಚು ಬೆಲೆಯ ಬೆಳೆ ನಷ್ಟವಾಗಿದೆ. ನಾವು 18,172 ಕೋಟಿ ಎನ್ ಡಿಆರ್ ಎಫ್ ನಿಯಮ ಪ್ರಕಾರ ಕೇಳಿದೆವು. ಆದರೆ ಸಿಕ್ಕಿದ್ದು ಕೇವಲ 3,454 ಕೋಟಿ ರೂಪಾಯಿ ಶೇಕಡಾ 19ಕ್ಕಿಂತ ಕಡಿಮೆ. ಕೇಂದ್ರದಿಂದ ಬಂದಿರುವ ಪರಿಹಾರ ಕಡಿಮೆಯಾಗಿದೆ ಎಂದು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ, ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದ್ದಾರೆ, ಕರ್ನಾಟಕ ಪ್ರತಿವರ್ಷ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿಸುತ್ತೇವೆ, ಹೀಗಿರುವಾಗ ರಾಜ್ಯಕ್ಕೆ ಅನ್ಯಾಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.