ಬೆಂಗಳೂರು : “ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ಈ ಮಧ್ಯೆ, ಈಗ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಸಾಕು ಎಂದು ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾಡ ವಿರೋಧಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಕೇಂದ್ರ ಸರ್ಕಾರದ ಹಣ ರಾಜ್ಯಕ್ಕೆ ಇನ್ನು ಬಂದಿಲ್ಲ. ಆದರೂ ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ ಅವರು ಈ ಮೊತ್ತ ಸಾಕು ಎಂದಿದ್ದಾರೆ. ಇದು ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತವೇ ಹೊರತು, ಇಷ್ಟು ಸಾಕು ಎನ್ನಲು ಇದು ಅವರ ಮನೆ ಆಸ್ತಿಯಲ್ಲ. ಇಂತಹ ಹೇಳಿಕೆ ಕೊಟ್ಟಿರುವ ಕುಮಾರಸ್ವಾಮಿ ನಾಡದ್ರೋಹಿ ಅಂತ ಆಕ್ರೋಶ ವ್ಯಕ್ತಪಡಿಸಿದರು . ನೀವು ಜನಪ್ರತಿನಿಧಿಯಾಗಿ ನಿಮ್ಮ ಮೈತ್ರಿ ಸರ್ಕಾರಕ್ಕೆ ಹೇಳಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡಬೇಕು. ಆದರೆ ಅವರು ಇಷ್ಟು ಪರಿಹಾರ ಸಾಕು ಎಂದು ಹೇಳಿದ್ದಾರೆ. ಇದು ಪಕ್ಷ ಅಥವಾ ರಾಜಕೀಯ ವಿಚಾರವಲ್ಲ. ರಾಜ್ಯಕ್ಕೆ ಆಗುತ್ತಿರುವ ದ್ರೋಹ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ರಾಜ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.