ರಾಷ್ಟ್ರ ರಾಜಧಾನಿಯ ಲೋಕಸಮರಕ್ಕೆ ಇದೆ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಇಳಿದಿದ್ದಾರೆ. ದಕ್ಷಿಣ ದೆಹಲಿ ಕ್ಷೇತ್ರದಿಂದ ರಾಜನ್ ಸಿಂಗ್ (26) ಎಂಬ ತೃತೀಯಲಿಂಗಿಯೊಬ್ಬರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಧೋತಿ, ಕ್ಯಾಪ್ ಮತ್ತು ಚಿನ್ನದ ಆಭರಣಗಳನ್ನು ಧರಿಸಿ, ಏಕಾಂಗಿಯಾಗಿ ಸಾಕೇತ್ನಲ್ಲಿರುವ ದಕ್ಷಿಣ ದೆಹಲಿಯ ಚುನಾವಣಾಧಿಕಾರಿಯ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ತೃತೀಯಲಿಂಗಿಗಳಿಗೆ ಪ್ರತ್ಯೇಕ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ ಸಾಮಾಜಿಕ ಸ್ಥಿತಿಗತಿ ಮತ್ತು ಹಕ್ಕುಗಳಿಗಾಗಿ ಅವರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ಜನರು ಮತ್ತು ಅಧಿಕಾರಿಗಳ ಗಮನ ಸೆಳೆಯಲು ನಾನು ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರವು ರಾಷ್ಟ್ರೀಯ ತೃತೀಯ ಲಿಂಗಿಗಳ ಆಯೋಗವನ್ನು ಸ್ಥಾಪಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದಾಗಿ ತೃತೀಯಲಿಂಗಿಗಳ ಮೂಲಭೂತ ಅಗತ್ಯಗಳು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಕನಿಷ್ಠ 1% ಮೀಸಲಾತಿಯನ್ನಾದರೂ ಜಾರಿಗೆ ತರಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.