ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ತಿರುಗಿ ಬಿದ್ದು, ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದ ದಿಂಗಾಲೇಶ್ವರ ಶ್ರೀಗಳು, ತಮ್ಮ ನಾಮಪತ್ರವನ್ನ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಇಂದು, ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಸೂಚಕಾರದ ಸಚ್ಚಿನ್ ಪಾಟೀಲ್ ಮತ್ತು ಅಮೃತ ಬಳ್ಳೊಳ್ಳಿ ಮೂಲಕ ನಾಮಪತ್ರ ಚುನಾವಣಾ ಆಯೋಗದಿಂದ ವಾಪಸ್ ತರಿಸಿಕೊಂಡಿದ್ದಾರೆ. ಕಣದಿಂದ ಹಿಂದೆ ಸರಿಯುವಂತೆ ಸಿಎಂ, ಡಿಸಿಎಂ ಮನವಿ ಮಾಡಿದ್ದರು.
ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರಿಗೆ ಬೆಂಬಲಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಂಗಾಲೇಶ್ವರ ಸ್ವಾಮೀಜಿಗೆ ಮನವಿ ಮಾಡಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಅವರು ನಾಮಪತ್ರ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ನ ತಂತ್ರ ಸಫಲಾವಾಗಿದ್ದು, ಚದುರುತ್ತಿದ್ದ ಮತಗಳು ಒಂದಡೆಯಾಗಲಿವೆ ಅನ್ನೋದು ಕೈ ಕಲಿಗಳು ಲೆಕ್ಕಾಚಾರ.