ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಗರಿ ಮಂಡ್ಯದಲ್ಲಿನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ ಹಿನ್ನೆಲೆ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಉಪಾಹಾರ ಹಾಗೂ ಊಟ ನೀಡಲು 140 ಕೌಂಟರ್ಗಳನ್ನು ತೆರಯಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ಮನುವನ್ನು ಈಗಾಗಲೇ ಸಿದ್ಧ ಮಾಡಲಾಗಿದೆ. ನೂರಾರು ಬಾಣಸಿಗರು ಹಾಗೂ ಸಾವಿರಾರು ಸಹಾಯಕರಿಂದ ಖಾದ್ಯಗಳು ತಯಾರಾಗುತ್ತಿವೆ. ಇನ್ನು ಈಗಾಗಲೇ ಸಿಹಿ ತಿನಿಸು ತಯಾರಿಕೆ ಆರಂಭವಾಗಿದ್ದು, ಹೋಳಿಗೆ, ಮೈಸೂರು ಪಾಕ್, ಬರ್ಫಿ, ಲಾಡುಗಳನ್ನು ತಯಾರು ಮಾಡಲಾಗುತ್ತಿದೆ.
ನಾಳೆಯಿಂದ ಮನು ಪ್ರಕಾರ ಊಟ ರೆಡಿಯಾಗಲಿದ್ದು, ಈ ಬಾರಿ ಮಂಡ್ಯ ಶೈಲಿಯಲ್ಲಿ ಊಟ ಇರಲಿದೆ. ಇದರ ಜೊತೆಗೆ ರಾಜ್ಯದ ಪ್ರಮುಖ ಊಟದ ಮೆನು ಸಹ ಇರಲಿದೆ. ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ನುಡಿಜಾತ್ರೆಯ ಸ್ವರಯಾತ್ರೆ’ ಸಂಗೀತ ಕಾರ್ಯಕ್ರಮ ಏರ್ಪಡಿಸಿರುವುದು ಈ ಬಾರಿಯ ವಿಶೇಷ.
ಡಿ.20ರಂದು ಸಂಗೀತ ನಿರ್ದೇಶಕ ಸಾಧುಕೋಕಿಲ ಮತ್ತು ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ಹಾಗೂ 21ರಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ‘ಸಂಗೀತ ಸಂಜೆ’ ನಡೆಯಲಿದೆ. ಎರಡು ದಿನ ಸಂಜೆ ವೇಳೆ ನಡೆಯಲಿರುವ ಕಾರ್ಯಕ್ರಮದಲ್ಲಿ, ‘ಸರಿಗಮಪ’ ಖ್ಯಾತಿಯ ಇಂದು ನಾಗರಾಜ್, ಸಾಕ್ಷಿ ಕಲ್ಲೂರ್, ಉಷಾ ಕೋಕಿಲ, ನದೀರಾ ಬಾನು, ಅನನ್ಯಾ ಪ್ರಕಾಶ್, ಕಂಬದ ರಂಗಯ್ಯ, ದಿವ್ಯಾ ರಾಮಚಂದ್ರ, ಸಂತೋಷ್ ಕನ್ನಡ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ನಗರದ ಅಂಬೇಡ್ಕರ್ ಭವನ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರ, ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.