ಆನೇಕಲ್ನ ಕೆಂಚಾಗಯ್ಯನದೊಡ್ಡಿಯಲ್ಲಿ ಕುಡಿದ ಮತ್ತಿನಲ್ಲಿ ಶುರುವಾದ ಗಲಾಟೆಯೊಂದು ಕೊಲೆಯಲ್ಲಿ ಕೊನೆಗೊಂಡ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತಾರಕಕ್ಕೇರಿದ ಜಗಳದಲ್ಲಿ ಒಬ್ಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಸುರೇಶ್ ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯಾಗಿದ್ದು, ನಿನ್ನೆ ರಾತ್ರಿ ತನ್ನ ಸ್ನೇಹಿತರೊಂದಿಗೆ ಶ್ಯಾನಭೋಗನಹಳ್ಳಿಯ ತರಂಗಿಣಿ ಬಾರ್ಗೆ ಮದ್ಯ ಸೇವನೆಗೆ ತೆರಳಿದ್ದ. ಇದೇ ಬಾರ್ನ ಮತ್ತೊಂದು ಟೇಬಲ್ನಲ್ಲಿ ಕಾಂತರಾಜು ಮತ್ತು ಆತನ ಗುಂಪು ಕೂಡ ಮದ್ಯ ಸೇವನೆ ಮಾಡುತ್ತಿತ್ತು.
ರಾತ್ರಿ 10 ಗಂಟೆ ಸುಮಾರಿಗೆ ಕಾಂತರಾಜು ಮತ್ತು ಆತನ ಸ್ನೇಹಿತರು ಜೋರಾಗಿ ಮಾತಾಡುತ್ತಿದ್ದರು. ಇದನ್ನು ಗಮನಿಸಿದ ಸುರೇಶ್, “ನಿಧಾನಕ್ಕೆ ಮಾತಾಡಿ” ಎಂದು ತಾಕೀತು ಮಾಡಿದ್ದಾನೆ. ಇದಕ್ಕೆ ಕಾಂತರಾಜು, “ನೀನು ಯಾರು ಕೇಳಲು?” ಎಂದು ಜಗಳ ಆರಂಭಿಸಿದ. ಇದಾದ ನಂತರ ಇಬ್ಬರ ನಡುವೆ ತಳ್ಳಾಟ ಮತ್ತು ನೂಕಾಟ ನಡೆದಿದೆ.
ಗಲಾಟೆಯ ನಂತರ ಸುರೇಶ್ ಬಾರ್ನಿಂದ ಮನೆಗೆ ತೆರಳಿದ್ದ. ಆದರೆ, ಕಾಂತರಾಜು ಮತ್ತು ಆತನ ಗುಂಪು ಸುರೇಶ್ನನ್ನು ಹಿಂಬಾಲಿಸಿಕೊಂಡು ಆತನ ಮನೆಗೆ ತೆರಳಿದ್ದಾರೆ. ಸುರೇಶ್ನ ಪತ್ನಿ ಬಾಗಿಲು ತೆರೆದಾಗ, ಕಾಂತರಾಜು ಗುಂಪು ಮನೆಯೊಳಗೆ ನುಗ್ಗಿ ಸುರೇಶ್ ಮೇಲೆ ದಾಳಿ ಮಾಡಿದೆ. ಕಾಂತರಾಜು ಸುರೇಶ್ನ ಪತ್ನಿಯ ಮುಂದೆಯೇ ಆತನಿಗೆ ಚಾಕುವಿನಿಂದ ಇರಿದಿದ್ದಾನೆ. ಕೊಲೆಯ ನಂತರ ಕಾಂತರಾಜು ಮತ್ತು ಆತನ ಗುಂಪು ಪರಾರಿಯಾಗಿದೆ.
ಗಾಯಗೊಂಡ ಸುರೇಶ್ನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವನು ಮೃತಪಟ್ಟಿದ್ದಾನೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚುವರಿ ಎಸ್ಪಿ ನಾಗೇಶ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.