ಬಾಗಲಕೋಟೆ: ಪ್ರಥಮ ಪಿಯುಸಿ (PUC) ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತೇಜಶ್ವಿನಿ ದೊಡ್ಡಮನಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಫೆಬ್ರವರಿ 27ರಂದು ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ತೇಜಶ್ವಿನಿಯನ್ನು ಕಾಲೇಜು ಸಿಬ್ಬಂದಿ ಪತ್ತೆಹಚ್ಚಿದ್ದರು. ಈ ಸಂಗತಿಯನ್ನು ಪೋಷಕರಿಗೆ ತಿಳಿಸಲಾಗಿತ್ತು. ಮರುದಿನ ಪೋಷಕರು ಕಾಲೇಜಿಗೆ ಬಂದು ನಕಲು ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು. ಸಿಸಿಕ್ಯಾಮೆರಾ ಪರಿಶೀಲನೆ ಮಾಡಲು ಸಿಬ್ಬಂದಿ ಮುಂದಾಗಿದ್ದರು. ಅಷ್ಟರಲ್ಲಿ ಕಾಲೇಜಿಂದ ಹೊರ ಹೋಗಿದ್ದ ವಿದ್ಯಾರ್ಥಿನಿ. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕುಟುಂಬದವರು ಮಗಳು ಕಾಣೆಯಾದ ನಂತರ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾರ್ಚ್ 1ರಂದು ಮುಧೋಳದ ಮಹಾರಾಣಿ ಕೆರೆಯಲ್ಲಿ ತೇಜಶ್ವಿನಿಯ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ 20ರವರೆಗೆ ರಾಜ್ಯದ 1,171 ಕೇಂದ್ರಗಳಲ್ಲಿ ನಡೆಯುತ್ತಿದೆ. 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ನಕಲು ತಡೆಯಲು ವೆಬ್ ಕಾಸ್ಟಿಂಗ್ ಮತ್ತು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ವಲಯ ಘೋಷಿಸಲಾಗಿದೆ.