ಬೆಂಗಳೂರಿನ ಬಿಬಿಎಂಪಿಯ ವಲಯ ಮುಖ್ಯ ಇಂಜಿನಿಯರ್ ಟಿ.ಡಿ.ನಂಜುಂಡಪ್ಪ , ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಲ್ಲೇಶಪ್ಪ ಹಾಗೂ ರಾಜಾಜಿನಗರ ಬೆಸ್ಕಾಂನ ಇಂಜಿನಿಯರ್ ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಟಿ.ಡಿ.ನಂಜುಂಡಪ್ಪ ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಬಿಬಿಎಂಪಿಯ ವಲಯ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ಡಿ.ನಂಜುಂಡಪ್ಪ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ಬಿಬಿಎಂಪಿ ದಾಖಲೆಗಳು, ಚಿನ್ನಾಭರಣ, ನಗದು ವಿವಿಧೆಡೆ ವಾಣಿಜ್ಯ ಸಂಕೀರ್ಣ ಸೇರಿ ಕೃಷಿ ಜಮೀನು ಕೂಡ ಪತ್ತೆಯಾಗಿದೆ.
ಹೆಚ್.ಬಿ.ಕಲ್ಲೇಶಪ್ಪ ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಇದೇ ವೇಳೆ ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ,₹32,92,700 ನಗದು ಪತ್ತೆಯಾಗಿದೆ.
ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿರುವ ನಾಗರಾಜ್ ಅವರ ನಿವಾಸ, ರಾಜಾಜಿನಗರ ಬೆಸ್ಕಾಂ ಕಚೇರಿ ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ. ಇವರು ಮೂಲ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೇ ಮಹದೇಶ್ವರ ಬೆಟ್ಟದವರು. ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳು, ಕೋಲಾರ ತಾಲ್ಲೂಕು ನರಸಾಪುರ ಬಳಿ ಭೂಮಿ ಹೊಂದಿರುವುದು ಬೆಳಕಿಗೆ ಬಂದಿದೆ.
ಲೋಕಾಯುಕ್ತ ತಂಡವು ಸಿಕ್ಕಿದ ದಾಖಲೆಗಳನ್ನು ಪರಿಶೀಲಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧವಾಗುತ್ತಿದೆ. ಈ ಪ್ರಕರಣವು ನಗರಸಭೆಯ ಉನ್ನತಾಧಿಕಾರಿಗಳಲ್ಲಿನ ಭ್ರಷ್ಟಾಚಾರದ ಆಳವನ್ನು ಬಹಿರಂಗಪಡಿಸಿದೆ.