ಬೆಂಗಳೂರಿನ ಹೆಚ್.ಎಂ.ಟಿ. ಲೇಔಟ್‌ನಲ್ಲಿ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಗಂಡನ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2021ರ ನವೆಂಬರ್ 21ರಂದು ಆಂಧ್ರಪ್ರದೇಶದ ಸಾಯಿಕುಮಾರ್ ಮತ್ತು ರಮ್ಯಶ್ರೀ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಿತರಾಗಿ ಮದುವೆಯಾಗಿದ್ದರು. ಇವರಿಗೆ 2 ವರ್ಷದ ಗಂಡು ಮಗು ಇದ್ದಾನೆ. ಮದುವೆಯಾದ ನಂತರ ಗಂಡನಿಂದ ನಿರಂತರ ಹಿಂಸೆ ಎದುರಿಸುತ್ತಿದ್ದ ರಮ್ಯಶ್ರೀ, ಪತಿ, ಮಾವ, ಅತ್ತೆ, ತಂಗಿ ಹಾಗೂ ಸಂಬಂಧಿಕರಿಂದ ಹಣದ ಬೇಡಿಕೆ ಮತ್ತು ದೈಹಿಕ ಕಿರುಕುಳಕ್ಕೆ ತುತ್ತಾಗಿದ್ದಾರೆ ಎಂದು ದೂರಲಾಗಿದೆ.
ಮದುವೆಯ ಆರಂಭದಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದ ಪತಿ, ನಂತರ ವರದಕ್ಷಿಣೆ ಹಣ ಮತ್ತು ಚಿನ್ನದ ವಡವೆಗಾಗಿ ಪತ್ನಿಗೆ ಹಿಂಸೆ ನೀಡಲು ಆರಂಭಿಸಿದ ಆರೋಪ ಕೇಳಿಬಂದಿದೆ. 2023ರ ಆಗಸ್ಟ್‌ನಲ್ಲಿ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ, ಕುಟುಂಬದ ಒತ್ತಾಯಕ್ಕೆ ಮಣಿದು ಪತಿ ಮನೆಗೆ ಹಿಂತಿರುಗಿದ್ದರು. ಆದರೆ ಹಣದ ಬೇಡಿಕೆ ಹೆಚ್ಚಾಗಿ, ಪತ್ನಿ ಮತ್ತು ಮಗನಿಗೆ ಹಿಂಸೆ ನೀಡಲಾಗುತ್ತಿತ್ತು.
2025ರ ಮಾರ್ಚ್ 7ರಂದು ಬೆಳಗ್ಗೆ 9 ಗಂಟೆಗೆ, ಪತಿ ಸಾಯಿಕುಮಾರ್ ಪತ್ನಿಯ ಕುತ್ತಿಗೆ ಹಿಡಿದು, ಚಾಕುವಿನಿಂದ ಕೊಲ್ಲಲು ಪ್ರಯತ್ನಿಸಿದ ಎಂದು ಆರೋಪಿಸಲಾಗಿದೆ. ಪತ್ನಿಯ ಕಿರುಚಾಟ ಕೇಳಿ ತಂದೆ ರಕ್ಷಣೆಗೆ ಧಾವಿಸಿದಾಗ, ಅವರಿಗೂ ಹಲ್ಲೆ ನಡೆಸಿ ಗಂಡ ಪರಾರಿಯಾಗಿದ್ದಾನೆ.
ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪತಿ, ಮಾವ, ಅತ್ತೆ, ತಂಗಿ ಹಾಗೂ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಮುಂದುವರೆದಿದೆ.