ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಗ್ರಾಮದಲ್ಲಿ ನಡೆದ ಎಸ್‌ಬಿಐ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣ ರಾಜ್ಯದ ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಕಳ್ಳರು ಹೈಟೆಕ್ ಪ್ಲಾನ್ ಮಾಡಿ, ಕಂಟೇನರ್‌ನಲ್ಲಿ ಕಾರು ಸಾಗಿಸಿ, ಸಿಸಿ ಕ್ಯಾಮೆರಾಗಳಿಗೆ ಕಪ್ಪು ಸ್ನೇ ಹಾಕಿ, ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರ ಕತ್ತರಿಸಿ ₹೩೦.೨೧ ಲಕ್ಷ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಬೆಳಗಿನ ಜಾವ ೩ ಗಂಟೆಗೆ ನಡೆದಿದ್ದು, ನಾಲ್ವರು ಕಳ್ಳರ ಗುಂಪು ಹೆದ್ದಾರಿಯಲ್ಲಿ ಕಂಟೇನರ್ ನಿಲ್ಲಿಸಿ, ಅದರೊಳಗಿನ ಕಾರನ್ನು ಇಳಿಸಿ ಸೂಲಿಬೆಲೆ ಎಟಿಎಂಗೆ ತಲುಪಿದ್ದರು. ಸಿಸಿ ಕ್ಯಾಮೆರಾಗಳಿಂದ ಮುಖ ಮರೆಮಾಡಿಕೊಳ್ಳಲು ಕಪ್ಪು ಬಣ್ಣದ ಕಂಬಳಿ ಹೊದ್ದಿದ್ದ ಇವರು, ಎಟಿಎಂನ ೪ ಕ್ಯಾಮೆರಾಗಳಿಗೆ ಸ್ನೇ ಹಾಕಿ ದೃಶ್ಯಗಳನ್ನು ಮಸುಕು ಮಾಡಿದ್ದಾರೆ. ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕತ್ತರಿಸಿ ಹಣವನ್ನು ದೋಚಿದ್ದಾರೆ.
ಕಳ್ಳರ ಮಾಸ್ಟರ್ ಪ್ಲಾನ್ ವಿಶೇಷತೆ? ಕಾರನ್ನು ಕಂಟೇನರ್‌ನಲ್ಲಿ ಸಾಗಿಸಿ, ದರೋಡೆ ನಂತರ ಅದೇ ಕಾರನ್ನು ಮತ್ತೆ ಕಂಟೇನರ್‌ಗೆ ಹೊತ್ತಿಸಿ ಪರಾರಿಯಾಗಿದ್ದು. ಈ ವಿಧಾನದಿಂದ ಸಿಸಿ ಟಿವಿಯಲ್ಲಿ ಕಾರಿನ ನಂಬರ್ ಅಥವಾ ಮಾದರಿ ಗುರುತಿಸಲು ಸಾಧ್ಯವಾಗಿಲ್ಲ. ಪೊಲೀಸರು ಕಂಟೇನರ್ ಯಾವುದು, ಕಳ್ಳರು ಎಲ್ಲಿಗೆ ಹೋದರು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದೇ ವಾರ ಬೀದರ್ ಮತ್ತು ಮಂಗಳೂರಿನಲ್ಲಿ ನಡೆದ ಎಟಿಎಂ ದರೋಡೆಗಳ ನಂತರ ಈ ಪ್ರಕರಣ ಪೊಲೀಸರಿಗೆ ಹೊಸ ಸವಾಲಾಗಿದೆ.