ಬೀದರ್: ಬೀದರ್ ಜಿಲ್ಲೆ ಬಸವಕಲ್ಯಾಣದ ಶಾ-ಹುಸೇನ್ ಬಡಾವಣೆಯಲ್ಲಿ ಮಹಿಳೆಯ ಭೀಕರವಾಗಿ ಹತ್ಯೆ ಮಾಡಿರುವ ಗಟನೆ ನಡೆದಿದೆ. ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸವಕಲ್ಯಾಣ ನಗರಸಭೆಯಲ್ಲಿ ಸ್ವಚ್ಚತಾ ಕಾರ್ಮಿಕರಾಗಿ ರೇಷ್ಮಾ ಹೈದರ್ (34) ಎಂಬವರು ಕೊಲೆಯಾದ ಮಹಿಳೆ.
ಘಟನೆಯ ವಿವರ
ಬೆಡ್ ರೂಮ್‌ನಲ್ಲಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಕೂಡಾ ಪೌರ ಕಾರ್ಮಿಕನೇ ಆಗಿದ್ದನು. ಕೊಲೆಗೆ ಕಾರಣ ಏನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಈ ಕೊಲೆ ಅನೈತಿಕ ಸಂಬಂಧದ ಹಿನ್ನೆಲೆಯಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯ ಕುತ್ತಿಗೆ ಹಾಗೂ ಬಾಯಿಗೆ ಗಂಭೀರ ಗಾಯಗಳಾಗಿದ್ದು, ಕ್ರೂರ ಹತ್ಯೆಯಾಗಿದೆ ಎಂದು ಹೇಳಲಾಗಿದೆ. ಮೃತ ಮಹಿಳೆ ರೇಷ್ಮಾ ಹೈದರ್ ಅವರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಪೊಲೀಸರ ಪರಿಶೀಲನೆ
ಘಟನಾ ಸ್ಥಳಕ್ಕೆ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ, ಡಿವೈಎಸ್‌ಪಿ ನ್ಯಾಮೆಗೌಡ್, ಸಿಪಿಐ ಅಲಿಸಾಬ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಈ ಪ್ರಕರಣವನ್ನು ತಿಳಿದು ಬೆಚ್ಚಿಬಿದ್ದಿದ್ದು, ಕೊಲೆಯು ಊರಿನ ಜನರಲ್ಲಿ ಆತಂಕ ಮೂಡಿಸಿದೆ.
ಆರೋಪಿಯ ಬಂಧನ
ಕೊಲೆಯ ಬಳಿಕ ಪರಾರಿಯಾಗಿದ್ದ ಆರೋಪಿ ಸಂತೋಷ್ ಎಂಬಾತನನ್ನು ಪೊಲೀಸರು ತಕ್ಷಣವೇ ಶೋಧಿಸಿ ಬಂಧಿಸಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.