ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯು ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ, ಕೆಲವೊಮ್ಮೆ ಈ ಯೋಜನೆಯಡಿ ಹಣವು ವಿಳಂಬವಾಗಿ ಜಮಾ ಆಗುತ್ತಿದೆ ಎಂಬ ಟೀಕೆಗಳು ಕೇಳಿಬಂದಿವೆ. ಈ ಎಲ್ಲ ಚರ್ಚೆಗಳ ನಡುವೆ, ಚಿಕ್ಕಮಗಳೂರಿನ ರೈತ ದಂಪತಿಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಜೀವನದಲ್ಲಿ ತಂದ ಬದಲಾವಣೆಯ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಹೌದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ನಿವಾಸಿಗಳಾದ ಜೇಮ್ಸ್ ಮತ್ತು ಜೆಸ್ಸಿ ದಂಪತಿಯು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿ ತಮ್ಮ ತೋಟದಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ಕಳೆದ ವರ್ಷ ಇವರು ಎರಡು ಬೋರ್‌ವೆಲ್‌ಗಳನ್ನು ಕೊರೆಸಿದ್ದರೂ, ಎರಡೂ ವಿಫಲವಾಗಿದ್ದವು. ಆದರೆ, ಈ ಬಾರಿ ಗೃಹಲಕ್ಷ್ಮಿ ಯೋಜನೆಯಿಂದ ಸಂಗ್ರಹವಾದ ಹಣದಿಂದ ಕೊರೆಸಿದ ಬೋರ್‌ವೆಲ್‌ನಿಂದ 3 ಇಂಚಿನಷ್ಟು ನೀರು ಉಕ್ಕಿ ಬಂದಿದ್ದು, ದಂಪತಿಗೆ ದೊಡ್ಡ ಸಂತಸ ತಂದಿದೆ.
ಜೇಮ್ಸ್ ಅವರ ಪತ್ನಿ ಜೆಸ್ಸಿ ಅವರು 13 ತಿಂಗಳ ಗೃಹಲಕ್ಷ್ಮಿ ಯೋಜನೆಯ 26,000 ರೂಪಾಯಿಯನ್ನು ಬೋರ್‌ವೆಲ್ ಕೊರೆಯಲು ಒದಗಿಸಿದ್ದಾರೆ. ಇದರ ಜೊತೆಗೆ, ಜೇಮ್ಸ್ ಅವರ ತಾಯಿಯವರು ಕೂಡ ತಮ್ಮ 13 ತಿಂಗಳ ಗೃಹಲಕ್ಷ್ಮಿ ಯೋಜನೆಯ 26,000 ರೂಪಾಯಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಒಟ್ಟು 52,000 ರೂಪಾಯಿ ವೆಚ್ಚದಲ್ಲಿ ಈ ಬೋರ್‌ವೆಲ್ ಕೊರೆಯಲಾಗಿದ್ದು, ಈ ಯಶಸ್ಸಿಗಾಗಿ ಜೇಮ್ಸ್ ದಂಪತಿಯು ಗೃಹಲಕ್ಷ್ಮಿ ಯೋಜನೆಯನ್ನು ರೂಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.