ಚಿಕ್ಕಮಗಳೂರು: ಚೀಟಿ ಹಣದ ವಿವಾದದಿಂದ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಸಂಜುನಾಯ್ಕ (27) ಎಂದು ಗುರುತಿಸಲಾಗಿದೆ. ಆರೋಪಿ ರುದ್ರೇಶ್ ನಾಯ್ಕ (30) ಎಂದು ತಿಳಿದುಬಂದಿದೆ. ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಈ ಗಲಾಟೆ ವೇಳೆ ರುದ್ರೇಶ್ ನಾಯ್ಕ, ಸಂಜುನಾಯ್ಕನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಸಂಜುನಾಯ್ಕ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಂಜುನಾಯ್ಕ ಚೀಟಿ ಕಂತುಗಳನ್ನು ಸರಿಯಾಗಿ ಕಟ್ಟದೇ, ಚೀಟಿ ಸದಸ್ಯರೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಇದರಿಂದ ಕುಪಿತರಾದ ಗ್ರಾಮಸ್ಥರು ಅವನನ್ನು ಚೀಟಿಯಿಂದ ಕೈಬಿಡಲಾಗಿತ್ತು. ಚೀಟಿ ವ್ಯವಹಾರ ನಡೆಯುವ ದಿನ, ಸಂಜು ಜಾಗಕ್ಕೆ ಬಂದಾಗ ಸದಸ್ಯರು ಅವನನ್ನು ವಾಪಸ್ ಕಳುಹಿಸಿದ್ದರು. ಆದರೆ, ಮನೆಗೆ ಹೋದ ಸಂಜು, ಸದಸ್ಯರಿಗೆ ಫೋನ್ ಮಾಡಿ ಜಗಳಕ್ಕೆ ಮುಂದಾದ. ಮತ್ತೆ ಸ್ಥಳಕ್ಕೆ ಬಂದು ನೇರವಾಗಿ ಗಲಾಟೆಗೆ ತಿರುಗಿದಾಗ, ರುದ್ರೇಶ್ ನಾಯ್ಕ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಜಗಳವನ್ನು ಬಿಡಿಸಲು ಯತ್ನಿಸಿದ ಅವಿನಾಶ್ ಎಂಬಾತನಿಗೂ ರುದ್ರೇಶ್ ಕಚ್ಚಿ, ಗಂಭೀರ ಗಾಯಗೊಳಿಸಿದ್ದಾನೆ.
ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. ಆರೋಪಿ ರುದ್ರೇಶ್ ನಾಯ್ಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.