ಐದು ದಶಕಗಳ ಹಿಂದೆ ಪೂಜಾರಿಕೆ ಪಟ್ಟಕ್ಕಾಗಿ ಬಿಗ್ ಪೈಟ್ ನಡೆದಿತ್ತು. ದೇವರ ಮೇಲಿನ ಆಭರಣ ಕದ್ದ ಆರೋಪದಲ್ಲಿ ಪೂಜಾರಿಯನ್ನ ಬಹಿಷ್ಕಾರ ಇಡಲಾಗಿತ್ತು. ಅಂದಿನಿಂದ ಇಂದಿನವರೆಗೂ ದೇವಸ್ಥಾನದ ಆಭರಣ ಸಿಕ್ಕಿರಲಿಲ್ಲ, ಪೂಜಾರಿಕೆ ಪಟ್ಟ ಕಟ್ಟಿರಲಿಲ್ಲ. ಇದೀಗ ಬ್ರಿಟಿಷ್ ಕಾಲದ ಪೆಟ್ಟಿಗೆ ಪತ್ತೆಯಾಗಿದೆ. ಕಳವಾಗಿವೆ ಎನ್ನಲಾದ ಚಿನ್ನಾಭರಣ ಪತ್ತೆಯಾಗಿದ್ದು, ಅಚ್ಚರಿಯ ಕಾಂತಾರ ಸಿನಿಮಾದಂತೆ 60 ವರ್ಷದ ಇತಿಹಾಸವನ್ನ ನೆನಪಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಂಗಾರ ದೇವರ ಹಟ್ಟಿ ಗ್ರಾಮದಲ್ಲಿ ಮ್ಯಾಸಬೇಡರ ಆರಾಧ್ಯ ದೈವ ಬಂಗಾರ ದೇವರ ದೇವಸ್ಥಾನವಿದೆ. ಹತ್ತಾರು ದಶಕಗಳಿಂದ ಈ ಭಾಗದ ಜನ ಬಂಗಾರ ದೇವರು ಸ್ವಾಮಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ವಿಶೇಷವಾಗಿ ಮ್ಯಾಸಬೇಡರ ಬುಡಕಟ್ಟು ಆಚರಣೆಗೆ ಬಂಗಾರ ದೇವರ ಶೌರ್ಯ ಕೂಡಾ ಸಾಕ್ಷಿ. ಇಂಥ ಬಂಗಾರ ದೇವಸ್ಥಾನದಲ್ಲಿ ಇದೀಗ ಐದಾರು ದಶಕಗಳ ಹಿಂದೆ ನಾಪತ್ತೆಯಾಗಿದ್ದ ಬ್ರಿಟಿಷ್ ಕಾಲದ ಪೆಟ್ಟಿಗೆ ಪತ್ತೆಯಾಗಿದೆ. ಈ ಪೆಟ್ಯಟಿಗೆಯಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಭಕ್ತರ ಅಚ್ಚರಿಗೆ ಕಾರಣವಾಗಿದೆ.
ಪತ್ತೆಯಾದ ಒಡವೆಗಳು ಸುಮಾರು 60 ವರ್ಷಗಳ ಹಿಂದಿನ ಆಭರಣಗಳು ಎನ್ನಲಾಗಿದ್ದು, ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು. ಇದೀಗ ಹೊಸ ದೇವಸ್ಥಾನಕ್ಕೆ ಅಡಿಪಾಯ ಹಾಕುವಾಗ ಬಂಗಾರ ದೇವರ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಬೆಳ್ಳಿಯ ಡಾಬು, ನಾಗರ ಹೆಡೆ, ಹೊಂಬಾಳೆ ಹೆಡೆ ಸೇರಿದಂತೆ ವಿವಿಧ ಆಭರಣಗಳು ಪತ್ತೆಯಾಗಿದ್ದು, ಇಲ್ಲಿನ ಭಕ್ತರ ಅಚ್ಚರಿಗೆ ಕಾರಣವಾಗಿದೆ.
ಇನ್ನೂ ಈ ಆಭರಣಗಳು ಕಳವಾಗಿದ್ದು ಹೇಗೆ ಅಂಥ ನೋಡೊದಾದ್ರೆ ಅದರ ಹಿಂದೆ ಒಂದು ದೊಡ್ಡ ರೋಚಕ ಘಟನೆ ಇದೆ ಎನ್ನಲಾಗಿದೆ. ಐದಾರು ದಶಕಗಳ ಹಿಂದೆ ಪೂಜಾರಿ ಬೋರಯ್ಯ ಎಂಬಾತ ದೇವಸ್ಥಾನ ಪಟ್ಟದ ಪೂಜಾರಿಯಾಗಿದ್ದನು. ಆತನ ಕಾಲದಲ್ಲಿ ದೇವಸ್ಥಾನದ ಬೆಳ್ಳಿ ಆಭರಣಗಳು ಏಕಾಏಕಿ ನಾಪತ್ತೆಯಾಗಿತ್ತು. ಅಂದು ದೇವಸ್ಥಾನದ ಯಜಮಾನರು ಪೂಜಾರಿಯನ್ನ ಬಹಿಷ್ಕಾರ ಹಾಕಿದ್ರು. ದೇವಸ್ಥಾನದಲ್ಲಿದ್ದ ಒಡವೆಗಳ ಕಳ್ಳತನ ಮಾಡಿದ್ದಾರೆ ಎಂದು ಪಟ್ಟದಿಂದ ಕೆಳಗೆ ಇಳಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಬಂಗಾರ ದೇವರ ಪೂಜಾರಿಕೆ ಪಟ್ಟ ಯಾರಿಗೂ ಕಟ್ಟಿರಲಿಲ್ಲ. ಆದರೆ 60 ವರ್ಷಗಳ ಹಿಂದೆ ಕಳೆದುಹೋದ ಬೆಳ್ಳಿ ಆಭರಣಗಳು ಇದೀಗ ಪತ್ತೆಯಾಗಿದ್ದು, ಹತ್ತಾರು ಚರ್ಚೆಗಳನ್ನ ಮತ್ತೆ ಹುಟ್ಟು ಹಾಕಿದೆ. ಕಳ್ಳತನದ ಅಪವಾದ ಹೊತ್ತು ಊರನ್ನೇ ಬಿಟ್ಟು ಹೋಗಿದ್ದ ಪೂಜಾರಿ ಓಬಯ್ಯ ತಪ್ಪಿತಸ್ಥನಲ್ಲ ಎಂಬಂತಾಗಿದೆ.
ಪೂಜಾರಿ ಪೈಟ್ ನಡುವೆ ಕಣ್ಮರೆಯಾಗಿದ್ದ ಬೆಳ್ಳಿ ಆಭರಣಗಳು ಇದೀಗ ದೇವಸ್ಥಾನದ ಆವರಣದಲ್ಲೇ ಪತ್ತೆಯಾಗಿದೆ. ಆದರೆ ಪೂಜಾರಿಕೆ ಪಟ್ಟ ಮಾತ್ರ ಇಂದಿಗೂ ಜೀವಂತವಾಗಿದೆ. ಇನ್ನಾದ್ರೂ ದಶಕಗಳ ಕಾಲವಿದ್ದ ಉಳಿದ ಸಮಸ್ಯೆ ಬಗೆಹರಿಯಲಿ ಅನ್ನೋದು ಭಕ್ತರ ಆಶಯ.