ದಾವಣಗೆರೆ: ಆರ್‌ಟಿಓ ಕಚೇರಿಯಲ್ಲಿ ಲಂಚದ ತಾಂಡವ ನೃತ್ಯ ಕಾಣುತ್ತಿದೆ. ಹೇಳೋರಿಲ್ಲ. ಕೇಳೋರಿಲ್ಲ ಹೀಗಾಗಿ ಇದಕ್ಕೆ ಕಡಿವಾಣ ಹಾಕಲೇಬೇಕು ಅಂತ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮುಂದಾಗಿದ್ದಾರೆ.
ದಾವಣಗೆರೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ಹಿರಿಯ ಮೋಟಾರು ನಿರೀಕ್ಷಕ ಮೊಹಮ್ಮದ್ ಖಾಲೀದ್ ಹಾಗೂ ಮತ್ತೊರ್ವ ಅಧಿಕಾರಿ ಸತೀಶ್ ಇವರುಗಳ ವಿರುದ್ಧ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ.
ಈ ಅಧಿಕಾರಿಗಳು ಹಲವಾರು ವರ್ಷಗಳಿಂದಲೇ ಬೇರು ಬಿಟ್ಟಿದ್ದು, ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷ ಇದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ ಈ ಅಧಿಕಾರಿಗಳ ಸಂಪರ್ಕದಲ್ಲಿರುವರೆನ್ನಲಾದ ಮಧ್ಯವರ್ತಿಗಳ ಹಾವಳಿಯು ವಿಪರೀತವಾಗಿದೆ. ಜನಸಾಮಾನ್ಯರ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಕೆಲವು ಅಧಿಕಾರಿಗಳಂತೂ ಅಕ್ರಮ ಆಸ್ತಿ ಮಾಡಿರುವುದು ಕೂಡ ಇದೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದಲ್ಲಿ ಎಲ್ಲವೂ ಬಹಿರಂಗವಾಗುತ್ತದೆ ಎಂದು ಮಣಿ ಸರ್ಕಾರ್ ಲೋಕಾಯುಕ್ತ ಅಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.