ಕರ್ನಾಟಕದ ರೆಬೆಲ್ ಸ್ಟಾರ್ ಮೊಮ್ಮಗ. ಅಭಿಷೇಕ ಅಂಬರೀಶ್ ಪುತ್ರನ ನಾಮಕರಣಕ್ಕೆ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲು ತಯಾರಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ಚಿತ್ರಗಾರ ಕುಟುಂಬದಿಂದ ತೊಟ್ಟಿಲು ನಿರ್ಮಾಣ ಮಾಡಲಾಗಿದೆ. ಕಲಾವಿದ ಶ್ರೀಧರ್ ಸೌಕಾರ್ ಅವರು ಕಳೆದ ಎರಡು ತಿಂಗಳಿಂದ ತೊಟ್ಟಿಲಿನ ಕೆಲಸ ಮಾಡಿದ್ದಾರೆ. ಇದೇ ಮಾರ್ಚ್ 14ರಂದು ಅಂಬಿ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು ಇದೇ ದಿನ ಜೂನಿಯರ್ ಅಂಬಿ ಈ ಕಲಘಟಗಿ ತೊಟ್ಟಿಲಿನಲ್ಲಿ ಪವಡಿಸಲಿದ್ದಾರೆ.
ಈ ಹಿಂದೆ ಸ್ವತಃ ಅಂಬರೀಶ್ ಅವರೇ ಆರ್ಡರ್ ಮಾಡಿ ಯಶ್ ಮಗಳಿಗೆ ಇದೇ ಕಲಘಟಗಿ ತೊಟ್ಟಿಲನ್ನು ಗಿಫ್ಟ್ ಮಾಡಿದ್ರು. ಅಂಬಿ ನಿಧನದ 14 ದಿನಗಳ ಬಳಿಕ ಅಂಬರೀಶ್ ಅವರು ಬಳಸುತ್ತಿದ್ದ ಮೊಬೈಲ್‌ಗೆ ತೊಟ್ಟಿಲು ರೆಡಿಯಾಗಿರೋ ಮೆಸೇಜ್ ಬಂದು ಎಲ್ಲರನ್ನೂ ದಂಗು ಬಡಿಸಿತ್ತು. ಅಂಬಿ ಆಸೆಯಂತೆ ಯಶ್ ಮಗಳು ಈ ವಿಶೇಷ ತೊಟ್ಟಿಲಿನಲ್ಲಿ ಆಟವಾಡಿ ಬೆಳೆದಿದ್ದಾಳೆ. ಹಾಗೆಯೇ ತನಗೆ ಮುಂದೆ ಹುಟ್ಟೋ ಮೊಮ್ಮಕ್ಕಳಿಗೂ ಇದೇ ತೊಟ್ಟಿಲು ಗಿಫ್ಟ್ ಮಾಡ ಬೇಕು ಅನ್ನೋದು ಅಂಬರೀಶ್ ಅವರ ಆಸೆಯಾಗಿತ್ತು..ಈಗ ಅಂಬರೀಶ್ ಆಸೆ ಪೂರ್ಣವಾಗುತ್ತಿದ್ದು ಮೊಮ್ಮಗನ ನಾಮಕರಣಕ್ಕೂ ಕಲಘಟಗಿಯಿಂದ ತೊಟ್ಟಿಲು ತಯಾರಾಗಿದೆ.
ಧಾರವಾಡ ಜಿಲ್ಲೆ ಕಲಘಟಗಿ ಅನ್ನೋ ಪುಟ್ಟ ತಾಲೂಕಿನಲ್ಲಿ ತಯಾರಾಗೋ ಈ ಅಪರೂಪದ ತೊಟ್ಟಿಲು ಭಾರತ ಮಾತ್ರವಲ್ಲ ದೇಶ ವಿದೇಶಗಳಲ್ಲೂ ತುಂಬಾನೇ ಪ್ರಸಿದ್ಧಿ ಪಡೆದಿದೆ. ಈ ವಿಶೇಷ ತೊಟ್ಟಿಲುಗಳಿಂದಲೇ ಕಲಘಟಗಿ ವಿಶ್ವಮಟ್ಟದಲಲ್ಲಿ ಪ್ರಸಿದ್ಧಿ ಪಡೆದಿದೆ. ನೈಸರ್ಗಿಕ ಗಿಡಮೂಲಿಕೆಗಳಿಂದ ಬಣ್ಣಗಳನ್ನು ತಯಾರಿಸಿ ಈ ತೊಟ್ಟಿಲಿಗೆ ಬಳಸುತ್ತಾರೆ. ದಶಾವತಾರ ಚಿತ್ತಾರಗಳನ್ನು ಬಿಡಿಸಿ ಈ ತೊಟ್ಟಿಲನ್ನು ತಯಾರಿಸಲಾಗಿದೆ.
ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳ ಅನೇಕ ಗಣ್ಯರು ಈ ಕಲಘಟಗಿ ತೊಟ್ಟಿಲನ್ನು ಖರೀದಿಸಿದ್ದಾರೆ. ನಮ್ಮ ಕರ್ನಾಟಕದಲ್ಲಿ ಕಲಘಟಗಿ ತೊಟ್ಟಿಲಿಗೆ ವಿಶೇಷ ಸ್ಥಾನಮಾನವಿದೆ. ನೈಸರ್ಗಿಕ ಬಣ್ಣಗಳನ್ನು ಅರಗಿನಲ್ಲಿ ತಯಾರಿಸಿ ತೊಟ್ಟಿಲಿಗೆ ಬಣ್ಣ ಬಳಿಯಲಾಗುತ್ತದೆ. ಹೀಗಾಗಿ ಈ ತೊಟ್ಟಿಲಿಗೆ ಹಚ್ಚೋ ಬಣ್ಣ ಬೇಗನೆ ಮಾಸುವುದಿಲ್ಲ.
ತೊಟ್ಟಿಲು ತಯಾರಾದ ಮೇಲೆ ಖರೀದಿದಾರರ ಮನೋಭಿಲಾಷೆಗೆ ತಕ್ಕಂತೆ ಚಿತ್ರಗಳನ್ನು ಬಿಡಿಸುತ್ತಾರೆ. ರಾಮಾಯಣ ಮಹಾಭಾರತ, ಬುದ್ಧ, ಬಸವ ಕಥಾವಳಿಗಳನ್ನು ಬಿಡಿಸುತ್ತಾರೆ. ಈಗ ಕೃಷ್ಣಾವತಾರದ ಚಿತ್ರಾವಳಿಗೆ ಬಹಳ ಬೇಡಿಕೆ ಇದೆಯಂತೆ. ಮುಸಲ್ಮಾನರಿಗೆ ಮಕ್ಕಾ ಮದಿನಾ ಹಾಗೂ ಕ್ರೈಸ್ತರಿಗೆ ಏಸುಕ್ರಿಸ್ತನ ಕಥಾವಳಿಯನ್ನೂ ಬಿಡಿಸಿಕೊಡುತ್ತಾರೆ.
ಸಾಗುವಾನಿ ಮರದಿಂದ ನಿರ್ಮಿಸಲಾಗುವ ಈ ತೊಟ್ಟಿಲುಗಳು ಬರೋಬ್ಬರಿ 150 ರಿಂದ 200 ವರ್ಷಗಳ ವರೆಗೂ ಬಾಳಿಕೆ ಬರುತ್ತವೆ. . ತೊಟ್ಟಿಲುಗಳ ದರ 20 ಸಾವಿರದಿಂದ ಒಂದು ಲಕ್ಷದವರೆಗೂ ಇದ್ದು, ಗ್ರಾಹಕರ ಆಸಕ್ತಿ, ತೊಟ್ಟಿಲಿನ ಗಾತ, ಅರಗಿನ ಬಣ್ಣದ ರಚನೆ ಇವುಗಳ ಮೇಲೆ ದರ ನಿಗದಿಯಾಗುತ್ತದೆ.