ಮಲೆಮಹದೇಶ್ವರ ಬೆಟ್ಟ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಪ್ರಾಧಿಕಾರಗಳನ್ನು ರಚನೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಸರಕಾರ ಮಾತ್ರ. ಈ ಕೆಲಸಗಳನ್ನು ಹಿಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ಏಕೆ ಮಾಡಲಿಲ್ಲ? ನಾವು ಸರ್ವ ಜನಾಂಗಕ್ಕೂ ಒಳಿತು ಬೇಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.
ಹೊಸದಾಗಿ ಸವದತ್ತಿ ಎಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಈ ಹಿಂದೆ ಮಲೆಮಹದೇಶ್ವರ, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಿದ್ದೆವು. ಮಲೆ ಮಹದೇಶ್ವರ ಸನ್ನಿಧಾನದ ಇತಿಹಾಸ ತೆಗೆದುಕೊಂಡರೆ ಈ ಹಿಂದೆ ಹೇಗಿತ್ತು, ಈಗ ಹೇಗಿದೆ ಎನ್ನುವುದಕ್ಕೆ ಸಾಕ್ಷಿ ಕಣ್ಣ ಮುಂದಿದೆ. ಜನರು ದೇವಸ್ಥಾನಕ್ಕೆ ಬಂದಾಗ ಪ್ರಾರ್ಥನೆ ಮಾಡಲು ಪ್ರಶಾಂತವಾದ, ಉತ್ತಮವಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಆಶಯ ಎಂದರು.
ಮಹದೇಶ್ವರನ ದರ್ಶನ ಮಾಡಿ ಪೂಜೆ ಸಲ್ಲಿಸಬೇಕು ಎಂದೇ ಬುಧವಾರ ರಾತ್ರಿಯೇ ಬಂದು ಇಲ್ಲಿ ವಾಸ್ತವ್ಯ ಹೂಡಿದ್ದೆ. ಮಲೆ ಮಹದೇಶ್ವರ ಸ್ವಾಮಿ ವಿಶೇಷವಾದ ದೇವರು. ಬಡವರು, ಮಧ್ಯಮ ವರ್ಗ ಹಾಗೂ ಎಲ್ಲಾ ವರ್ಗಗಳ ಜನರು ಆರಾಧಿಸುವ ದೇವರು. ಬುಡಕಟ್ಟು ಜನರು ಸಹ ಆರಾಧಿಸುವ ಪದ್ಧತಿಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸಂಪುಟ ಸಭೆಯಿಂದ ಚಾಮರಾಜನಗರಕ್ಕೆ ಇರುವ ನಿರೀಕ್ಷೆಗಳೇನು ಎಂದು ಕೇಳಿದಾಗ, ನಿರೀಕ್ಷೆಗಳನ್ನು ಈಡೇರಿಸಲು ಎಂದೇ ಇಡೀ ಸರ್ಕಾರ ಜಿಲ್ಲೆಗೆ ಬಂದಿದೆ. ನಮ್ಮ ಊರಿನಿಂದ ಈ ಹಿಂದೆ ಬೆಟ್ಟಕ್ಕೆ ಬರಬೇಕು ಎಂದರೆ 4-5 ಗಂಟೆ ಪ್ರಯಾಣವಾಗುತ್ತಿತ್ತು. ಈಗ ರಸ್ತೆ ಅಭಿವೃದ್ಧಿಯಾಗಿದೆ.
ಪ್ರತಿವರ್ಷ ಲಕ್ಷಾಂತರ ಜನ ಕಾವೇರಿ ನದಿ ದಾಟಿಕೊಂಡು ಕ್ಷೇತ್ರಕ್ಕೆ ಬರುತ್ತಾರೆ. ಇದಕ್ಕೆ ಅನುಕೂಲವಾಗುವಂತೆ ಮೇಕೆದಾಟು ಆದ ನಂತರ ಮೇಲ್ಸೇತುವೆ ರಸ್ತೆ ನಿರ್ಮಾಣದ ಬಗ್ಗೆ ಯೋಚನೆ ಮಾಡಲಾಗುವುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಏನೇನು ಕೆಲಸ ಮಾಡಬೇಕು ಎಂದು ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಆಚಾರ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎನ್ನುವುದು ನಮ್ಮ ಆಲೋಚನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.