- ಎತ್ತಿನ ಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 285 ಕೋಟಿ ವೆಚ್ಚದಲ್ಲಿ 62 ಕೆರೆಗಳಿಗೆ ನೀರು ತುಂಬಿಸುವ ಈ ಮಹತ್ವದ ಕಾಮಗಾರಿಗೆ ಚಾಲನೆ
- ಈ ಮಹತ್ವದ ಕಾಮಗಾರಿಗಳಿಂದ ಕೊರಟಗೆರೆ ತಾಲೂಕಿನ ಅಂತರ್ಜಲ ವೃದ್ಧಿ
ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರ ನೀರಿನ ಬವಣೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಏತ್ತಿನಹೊಳೆ, ಕೆ.ಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಯಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.
ಇಂದು ಗೊರವನಹಳ್ಳಿಯಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿ ಅಂತರ್ಜಲ ಅಭಿವೃದ್ದಿ ಸಲುವಾಗಿ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಗೆ ಮಾನ್ಯ ಗೃಹ ಸಚಿವರಾದ ಪರಮೇಶ್ವರ್ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಮ್ಮ ಸರ್ಕಾರದ ಗುರಿಯಂತೆ, ಎತ್ತಿನಹೊಳೆ ಯೋಜನೆ ಅಡಿ ಈಗಾಗಲೇ ತಿಪಟೂರು ತಾಲೂಕಿನ 105 ಕೆರೆಗಳು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 131 ಕೆರೆಗಳ ನೀರು ತುಂಬಿಸುವ ಕಾಮಗಾರಿಗಳನ್ನು ಅಂತಿಮ ಹಂತಕ್ಕೆ ತಂದು, ಆ ಭಾಗದ ರೈತರು, ಜನರ ಮೊಗದಲ್ಲಿ ನಮ್ಮ ಸರ್ಕಾರ ಮಂದಹಾಸ ಮೂಡಿಸಿದೆ. ಮಧುಗಿರಿ ಗುರುತ್ವಾ ಕಾಲುವೆಯಿಂದ ಮಧುಗಿರಿ ತಾಲೂಕಿನಲ್ಲಿ 45 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೂ ಈ ಎತ್ತಿನ ಯೋಜನೆ ಅಡಿ ತಾಂತ್ರಿಕ, ಆಡಳಿತಾತ್ಮಕ ಅನುಮೋದನೆ ಪಡೆದಿರುವುದಲ್ಲದೇ, ಕಾಮಗಾರಿಗಳೂ ಆರಂಭಿಸಿರುವುದು ಭವಿಷ್ಯದ ನೀರಿನಬವಣೆ ನೀಗಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆಗೆ ಸಾಕ್ಷಿಯಾಗಿದೆ. ಎತ್ತಿನಹೊಳೆ ಯೋಜನೆಯ ಸಮರ್ಪಕ ಅನುಷ್ಠಾನದ ಮೂಲಕ ಬಯಲು ಸೀಮೆಯ 7 ಜಿಲ್ಲೆಗಳ ನೀರಿನ ಬವಣೆಗೆ ಮುಕ್ತಿ ದೊರಕಿಸುವುದಂತೂ ಖಚಿತ. ಮುಖ್ಯವಾಗಿ,ಇದರ ಹೆಚ್ಚಿನ ಲಾಭ ತುಮಕೂರು ಜಿಲ್ಲೆಯ ರೈತರಿಗೂ ಆಗಲಿದೆ. ಈ ಮುಖ್ಯ ಕಾಲುವೆಯ ಉದ್ದ 262 ಕಿ.ಮೀಯಾಗಿದ್ದು, ಇದರಲ್ಲಿ ಸುಮಾರು 159 ಕಿ.ಮೀಯಷ್ಟು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲೇ ಹಾದುಹೋಗುವುದರಿಂದ ಸುತ್ತಮುತ್ತ ರೈತರ ಕೃಷಿ ಚಟುವಟಿಕೆಗಳಿಗೂ, ಜನರ ಕುಡಿಯುವ ನೀರಿಗೂ ಪರಿಹಾರ ದೊರೆಯಲಿದೆ ಎನ್ನುವುದು ಖುಷಿಯ ವಿಚಾರ ಎಂದರು.
ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರು ನೀರಿನ ಬವಣೆಯಿಂದ ತತ್ತರಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಈಗಾಗಲೇ ಕೆಸಿ ವ್ಯಾಲಿ, ಹೆಚ್ ನ್ ವ್ಯಾಲಿಯಂತಹ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತುಮಕೂರು ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲವನ್ನು ಅಭಿವೃದ್ದಿಗೊಳಿಸಿ, ವ್ಯವಸಾಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.