ಹಾವೇರಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಎಂಬ ಯುವತಿ ಕೊಲೆ ಪ್ರಕರಣ ಇಡೀ ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಅಂತದ್ದೇ ಒಂದು ಘಟನೆ ಹಾವೇರಿಯಲ್ಲಿ ಮರಕಳಿಸಿದ್ದು, ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ಯುವತಿಯನ್ನು ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ತಿಳಿಬಂದಿದೆ. ಸ್ವಾತಿ, ರಾಣೆಬೆನ್ನೂರು ತಾಲೂಕಿನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ತಂದೆ ತೀರಿಕೊಂಡ ನಂತರ ತಾಯಿ ಜೊತೆ ಮಾಸೂರು ಗ್ರಾಮದಲ್ಲಿ ವಾಸವಾಗಿದ್ದಳು.
ಘಟನೆ ಹಿನ್ನೆಲೆ
ಸ್ವಾತಿ ಮತ್ತು ನಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಸ್ವಾತಿ ನಯಾಜ್ ಜೊತೆ ಮಾತನಾಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ನಯಾಜ್, ತನ್ನ ಸ್ನೇಹಿತರಾದ ವಿನಯ್ ಮತ್ತು ದುರ್ಗಾಚಾರಿ ಜೊತೆ ಸೇರಿ ಸ್ವಾತಿಯನ್ನು ಕಾರಿನಲ್ಲಿ ರಾಣೆಬೆನ್ನೂರಿಗೆ ಕರೆದೊಯ್ದು ಮಾತುಕತೆ ನಡೆಸಿದನು.
ಈ ವೇಳೆ, ಸ್ವಾತಿ ನಯಾಜ್ ನಿಂದ ದೂರವಿರುವಂತೆ ವಿನಯ್ ಮತ್ತು ದುರ್ಗಾಚಾರಿ ಬೆದರಿಕೆ ಹಾಕಿದ್ರು. ಆದರೆ ಸ್ವಾತಿ ಒಪ್ಪಿಕೊಳ್ಳಲಿಲ್ಲ. ಇದರಿಂದ ಕೋಪಗೊಂಡ ಮೂವರು ದುಪ್ಪಟ್ಟದಿಂದ ಕತ್ತು ಬಿಗಿದು ಸ್ವಾತಿಯನ್ನು ಹತ್ಯೆ ಮಾಡಿದರು. ನಂತರ, ಶವವನ್ನು ತುಂಗಭದ್ರಾ ನದಿಗೆ ಎಸೆದು ಪರಾರಿಯಾದ್ದರು.
ಸ್ವಾತಿ ಮಾರ್ಚ್ 3ರಂದು ನಾಪತ್ತೆಯಾಗಿದ್ದಳು. ಪೋಷಕರು ಹುಡುಕಾಟ ನಡೆಸಿ, ಮಾರ್ಚ್ 7ರಂದು ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಆದರೆ ಮಾರ್ಚ್ 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಸ್ವಾತಿಯ ಶವ ಪತ್ತೆಯಾಗಿತ್ತು. ಆದರೆ, ಹಲಗೇರಿ ಠಾಣೆ ಪೊಲೀಸರು ಶವವನ್ನು ಅಪರಿಚಿತ ಎಂದು ಘೋಷಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಪೋಸ್ಮಾರ್ಟಂ ರಿಪೋರ್ಟ್ ನಲ್ಲಿ ಇದು ಆಕಸ್ಮಿಕ ಸಾವಲ್ಲ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಹಲಗೇರಿ ಠಾಣೆ ಪೋಲಿಸರು ಆರೋಪಿ ನಯಾಜ್ ನನ್ನು ಅರೆಸ್ಟ್ ಮಾಡಿದ್ದಾರೆ.