ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ಕೊಲೆ ಬೆದರಿಕೆ ಹಾಕಿರುವ ಇ-ಮೇಲ್ವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಿಂದಾರ್ ರಜಪೂತ್ ಎಂಬ ಹೆಸರಿನಲ್ಲಿ ಬಂದಿರುವ ಈ ಬೆದರಿಕೆ ಮೇಲ್ನಲ್ಲಿ, ಇಬ್ಬರನ್ನು ಕೊಲೆ ಮಾಡಿ “ಫ್ರಿಡ್ಜ್ಗೆ ತುಂಬುವುದಾಗಿ” ಹಾಗೂ “ಟ್ರಾಲಿ ಬ್ಯಾಗ್ಗೆ ತುಂಬುವುದಾಗಿ” ಗಂಭೀರ ಬೆದರಿಕೆ ಹಾಕಲಾಗಿದೆ.
ಇ-ಮೇಲ್ನಲ್ಲಿ, ರಾಮಪುರ ಪ್ರಭಾಕರ್ ಎಂಬ ವ್ಯಕ್ತಿಗೆ ಒಂದು ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, ಅವನು ಇದುವರೆಗೂ ಹಣವನ್ನು ವಾಪಸ್ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಪ್ರಭಾಕರ್ ಈ ಹಣವನ್ನು ತನ್ನ ನಾದಿನಿ (ಸೊಸೆ) ಹಾಗೂ ಪೋಷಕರ ಮನೆಯಲ್ಲಿ ಇಟ್ಟಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಇ-ಮೇಲ್ನಲ್ಲಿ ಮತ್ತಷ್ಟು ವಿವರಗಳನ್ನು ನೀಡಲಾಗಿದ್ದು, ಪ್ರಭಾಕರ್ಗೆ ಇಬ್ಬರು ಮಕ್ಕಳಿದ್ದಾರೆ ಮತ್ತು ಇತ್ತೀಚೆಗೆ ಒಬ್ಬ ಮಗನಿಗೆ ಮದುವೆ ಮಾಡಿದ್ದಾನೆ ಎಂದು ತಿಳಿಸಲಾಗಿದೆ.
ಈ ಮೇಲ್ನಲ್ಲಿ, ಪ್ರಭಾಕರ್ಗೆ ಸಾಲದ ಹಣವನ್ನು ವಾಪಸ್ ಮಾಡಲು ಯಾವುದೇ ಆದಾಯದ ಮೂಲ ಇಲ್ಲ ಎಂದು ಆರೋಪಿಸಿ, ಆತನನ್ನು ಕೊಲೆ ಮಾಡುವ ಬೆದರಿಕೆ ಹಾಕಲಾಗಿದೆ. ಜೊತೆಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ, “ಪ್ರಭಾಕರ್ಗೆ ಹಣ ಕೊಡಿಸದಿದ್ದರೆ, ನಿಮ್ಮನ್ನೂ ಕೊಲೆ ಮಾಡುವೆ” ಎಂದು ಗಂಭೀರವಾಗಿ ಎಚ್ಚರಿಕೆ ನೀಡಲಾಗಿದೆ.
ಈ ಇ-ಮೇಲ್ ಆಧರಿಸಿ, ಬೆಂಗಳೂರು ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಸಿಂದಾರ್ ರಜಪೂತ್ ಎಂಬ ಹೆಸರಿನ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಈಗ ಈ ವ್ಯಕ್ತಿಯನ್ನು ಪತ್ತೆಹಚ್ಚಲು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇ-ಮೇಲ್ನ ಮೂಲವನ್ನು ಗುರುತಿಸಲು ಸೈಬರ್ ಕ್ರೈಂ ವಿಭಾಗದ ಸಹಾಯವನ್ನೂ ಪಡೆಯಲಾಗುತ್ತಿದೆ.
ಈ ಘಟನೆಯು ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಈ ಬೆದರಿಕೆಯನ್ನು ಖಂಡಿಸಿದ್ದು, ಇದು ರಾಜಕೀಯ ದ್ವೇಷದಿಂದ ಕೂಡಿದ ಕೃತ್ಯ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ರವರು, “ನಾವು ಯಾವುದೇ ಬೆದರಿಕೆಗೆ ಭಯಪಡುವುದಿಲ್ಲ, ಜನರ ಸೇವೆಯನ್ನು ಮುಂದುವರೆಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.