ಕೊಡಗು : ಕರ್ನಾಟಕದ ಪ್ರವಾಸಿಗರ ಸ್ವರ್ಗ ಹಾಗೂ ಕನ್ನಡ ನಾಡಿನ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬುಧವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಈ ಪ್ರದೇಶದ ಹಲವೆಡೆ ಭೂಮಿ ನಡುಗಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ.
ಮಡಿಕೇರಿ ತಾಲ್ಲೂಕಿನ ಮದೆನಾಡು, ಜೋಡುಪಾಲ ಹಾಗೂ ಮೊಣ್ಣಂಗೇರಿ ಭಾಗಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ. ಮನೆಯಲ್ಲಿದ್ದ ಸಾಮಾನುಗಳು ಅಲ್ಲಾಡಿದರೆ, ಗ್ರಂಥಾಲಯದಲ್ಲಿದ್ದ ಪುಸ್ತಕಗಳು ನಡುಗಿದವು. ಭೂಮಿ ದೊಡ್ಡದಾಗಿ ಗುಡುಗಿದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಈಗಾಗಲೇ 2018ರಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದರಿಂದ, ಮತ್ತೆ ಅದೇ ರೀತಿಯ ಅನಾಹುತವಾಗುವ ಭಯ ಜನರಲ್ಲಿದೆ.
ಭೂಕಂಪನದ ತೀವ್ರತೆ ಹಾಗೂ ಜನರ ಅನುಭವ
ಮದೆನಾಡು ಪಂಚಾಯಿತಿ ಸಿಬ್ಬಂದಿ ಶಿಲ್ಪ ಮತ್ತು ವೆಂಕಮ್ಮ ಮಾತನಾಡಿ, “ಇಂದು ಬೆಳಿಗ್ಗೆ 10.50ರ ಸಮಯದಲ್ಲಿ ಭೂಕಂಪನದ ಅನುಭವವಾಯಿತು. ಗ್ರಂಥಾಲಯದಲ್ಲಿ ಕುಳಿತು ಬರೆಯುತ್ತಿದ್ದಾಗ ಭೂಮಿ ನಡುಗಿದ ಅನುಭವವಾಗಿದ್ದು, ಪುಸ್ತಕಗಳ ರ್ಯಾಕ್‌ಗಳು ಅಲ್ಲಾಡಿದವು. ಈ ಅನುಭವದ ನಂತರ ವಿಷಯವನ್ನು ಜಿಲ್ಲಾಡಳಿತಕ್ಕೆ ತಕ್ಷಣ ತಿಳಿಸಿದೆವು” ಎಂದು ತಿಳಿಸಿದ್ದಾರೆ.
ಮಡಿಕೇರಿ ಸಮೀಪದ ದೇವಸ್ತೂರು ಗ್ರಾಮದಲ್ಲೂ ಈ ಘಟನೆ ನಡೆದಿದೆ. ಮನೆಗಳಲ್ಲಿನ ವಸ್ತುಗಳು ಅಲ್ಲಾಡಿದ ಅನುಭವ ಜನರಿಗೆ ಉಂಟಾಗಿದೆ. 2018ರಲ್ಲೂ ಇದೇ ರೀತಿಯ ಭೂಕಂಪನದ ಅನುಭವವಾಗಿದ್ದು, ನಂತರ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು ಎಂದು ಗ್ರಾಮಸ್ಥರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಜಿಲ್ಲಾಡಳಿತದ ಪ್ರತಿಕ್ರಿಯೆ
ಜಿಲ್ಲೆಯಲ್ಲಿ ಯಾವುದೇ ದೊಡ್ಡ ಅನಾಹುತವಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. “ಈ ಘಟನೆಯಿಂದ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಗೋಡೆಗಳಲ್ಲಿ ಬಿರುಕು ಬೀಳುವುದು ಅಥವಾ ಸಾಮಾನುಗಳು ನೆಲಕ್ಕುರುಳುವುದು ಕಂಡುಬಂದಿಲ್ಲ. ಆದರೆ, ಈ ಘಟನೆಗೆ ಕಾರಣವೇನು ಎಂಬುದನ್ನು ಅರಿಯಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರಲ್ಲಿ ಆತಂಕ
2018ರ ಭೂಕುಸಿತದಿಂದಾಗಿ ಈಗಲೂ ಜನರು ಭಯದಿಂದಲೇ ಜೀವನ ನಡೆಸುತ್ತಿದ್ದಾರೆ. “ನಮ್ಮ ಗ್ರಾಮ ಈಗಲೂ ಭೂಕುಸಿತದ ಅಪಾಯದಲ್ಲಿದೆ. ಪ್ರತೀ ಬಾರಿ ಭೂಮಿ ನಡುಗಿದಾಗ, ಮತ್ತೊಮ್ಮೆ ಭಾರೀ ಮಳೆಯಿಂದ ಗುಡ್ಡ ಕುಸಿಯುತ್ತದೆಯೇ ಎಂಬ ಭೀತಿ ಮೂಡುತ್ತದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈಗಾಗಲೇ ಮಡಿಕೇರಿಯಲ್ಲಿ ಭೂಮಿ ನಡುಗಿದನ್ನು ಗಮನಿಸಿ, ಜಿಲ್ಲಾಡಳಿತ ಮತ್ತು ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ನಡೆಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭೂಕಂಪನದ ತೀವ್ರತೆ ಹೆಚ್ಚಾಗುತ್ತದೆಯೇ ಅಥವಾ ಇಂತಹ ಘಟನೆಗಳ ಸಂಭವನೀಯತೆ ಏನದು ಎಂಬುದರ ಮೇಲೆ ಹೆಚ್ಚಿನ ಅಧ್ಯಯನ ನಡೆಯಲಿದೆ.