ಮಂಡ್ಯದಲ್ಲಿ ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ

Shn (27)

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಶ್ರೀಕಾಂತ್ ಎಂಬಾತ ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶ್ರೀಕಾಂತ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT
ADVERTISEMENT

ಶ್ರೀಕಾಂತ್ ಮತ್ತು ಲಕ್ಷ್ಮೀ 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಶ್ರೀಕಾಂತ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ. ಆನಂತರ, ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿಯನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಇದಕ್ಕೆ ಒಪ್ಪದ ಲಕ್ಷ್ಮೀಗೆ ಶ್ರೀಕಾಂತ್ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಷಯದಿಂದ ದಂಪತಿಗಳ ನಡುವೆ ಆಗಾಗ ಜಗಳವೂ ಉಂಟಾಗುತ್ತಿತ್ತು.

ಕಿರುಕುಳ ತಾಳಲಾರದೆ, ಮೂರು ದಿನಗಳ ಹಿಂದೆ ಲಕ್ಷ್ಮೀ ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಘಟನೆಯ ಬೆನ್ನಿಗೆ, ಏಪ್ರಿಲ್ 12ರಂದು ರಾಜಿಗಾಗಿ ಕರೆದುಕೊಂಡು ಹೋಗಿ, ಶ್ರೀಕಾಂತ್ ಮತ್ತು ಕುಟುಂಬದ ಕೆಲವು ಸದಸ್ಯರು ಲಕ್ಷ್ಮೀ ಮತ್ತು ಶೃತಿಯವರ ತಲೆಗೆ ರಾಡ್‌ನಂತಹ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಗಾಯಗೊಂಡ ಇಬ್ಬರನ್ನೂ ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಷ್ಮೀಯ ಸಹೋದರ ರವಿಕಿರಣ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ, ಶ್ರೀಕಾಂತ್ ಹಣದ ಆಮಿಷ ತೋರಿಸಿ ಮತಾಂತರಕ್ಕೆ ಒತ್ತಾಯಿಸಿದ್ದಲ್ಲದೆ, ಲಕ್ಷ್ಮೀಯ ತವರು ಮನೆಯಿಂದ 25 ಲಕ್ಷ ರೂಪಾಯಿಗಳನ್ನು ಒತ್ತಾಯದಿಂದ ತಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಣವನ್ನು ಬಳಸಿಕೊಂಡು ಶ್ರೀಕಾಂತ್ ಚರ್ಚ್ ನಿರ್ಮಿಸಿ, ಗ್ರಾಮದ ಹಲವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಾಲಹಳ್ಳಿ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಮತಾಂತರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಕ್ಕಲಿಗ, ವಿಶ್ವಕರ್ಮ, ಮರಾಠಿ ಸಮುದಾಯ ಸೇರಿದಂತೆ ವಿವಿಧ ಜನಾಂಗದವರನ್ನು ಟಾರ್ಗೆಟ್ ಮಾಡಿ, ಕಷ್ಟದಲ್ಲಿರುವವರಿಗೆ ಹಣದ ಆಮಿಷ ತೋರಿಸಿ ಮತಾಂತರಗೊಳಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. “ಮತಾಂತರಗೊಂಡವರಿಗೆ ಲಕ್ಷಾಂತರ ರೂಪಾಯಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ಹಣವು ಬೇರೆಡೆಯಿಂದ ಬರುತ್ತಿದೆ,” ಎಂದು ಶೃತಿ ಆರೋಪಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version