ಪಹಲ್ಗಾಮ್‌ ದಾಳಿಕೋರರನ್ನು ಸದೆಬಡಿಯಬೇಕು: ಎಂ‌ ಬಿ ಪಾಟೀಲ್‌ ಆಕ್ರೋಶ

123 2025 04 23t130335.541
ADVERTISEMENT
ADVERTISEMENT

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯು ಅತ್ಯಂತ ಹೇಯ ಮತ್ತು ಹೇಡಿತನದ ಕೃತ್ಯವಾಗಿದೆ. ಈ ದಾಳಿಗೆ ಕಾರಣರಾದ ಉಗ್ರಗಾಮಿಗಳನ್ನು ಯಾವುದೇ ಕ್ಷಮೆಯಿಲ್ಲದೆ ಸದೆಬಡಿಯಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಉಗ್ರಗಾಮಿಗಳಿಗೆ ಧರ್ಮ, ಜಾತಿ, ಸಂಸ್ಕೃತಿ ಎಂಬುದೇ ಇಲ್ಲ. ಅಮಾಯಕರ ಹತ್ಯೆಯು ಅಮಾನುಷ ಕೃತ್ಯವಾಗಿದೆ. ಇಂತಹ ಉಗ್ರರನ್ನು ಕಟ್ಟುನಿಟ್ಟಾಗಿ ಹತ್ತಿಕ್ಕಬೇಕು. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದ್ದರೆ, ಆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು,” ಎಂದು ಒತ್ತಾಯಿಸಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಿತ್ತು. ಸ್ಥಳೀಯ ಜನರು ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿಕೊಂಡು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸೇನಾಪಡೆಗಳನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿತ್ತು. ಆದರೆ, ಉಗ್ರಗಾಮಿಗಳು ಈ ಸಂದರ್ಭದ ದುರ್ಲಾಭ ಪಡೆದುಕೊಂಡು ಈ ಬರ್ಬರ ಕೃತ್ಯವನ್ನು ಎಸಗಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ಆರೋಪಿಸಿದ್ದಾರೆ. “ಕೇಂದ್ರ ಸರ್ಕಾರವು ಇದೀಗ ಕಾಶ್ಮೀರದಲ್ಲಿ ಮತ್ತಷ್ಟು ಸೇನಾಪಡೆಯನ್ನು ನಿಯೋಜಿಸಬೇಕು,” ಎಂದು ಸಚಿವ ಎಂ.ಬಿ. ಪಾಟೀಲ್‌ ಅವರು ಸಲಹೆ ನೀಡಿದ್ದಾರೆ.

ಈ ದುಃಖದ ಘಟನೆಯಲ್ಲಿ ಕರ್ನಾಟಕದ ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. “ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಎಲ್ಲ ರೀತಿಯ ಸಹಾಯವನ್ನು ಒದಗಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟು ತಕ್ಷಣವೇ ಸ್ಪಂದಿಸಿದ್ದಾರೆ,” ಎಂದು ಎಂ.ಬಿ. ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

Exit mobile version