ಮೈಸೂರು; ವರದಿಗೆ ಪ್ರತಿಕ್ರಿಯೆ ಬಯಸಿ ಅರಮನೆ ಆಡಳಿತ ಮಂಡಳಿ ಕಚೇರಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಅರಮನೆ ಆಡಳಿತ ಮಂಡಳಿ ಡಿಡಿ ಮತ್ತು ಸಹೋದ್ಯೋಗಿಗಳ ವಿರುದ್ಧ ನಗರದ ದೇವರಾಜ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆ. 25 ರಂದು ಇಂಡಿಯನ್ ಟಿವಿ ವರದಿಗಾರ ಹಾಗೂ ಕ್ಯಾಮರಾಮನ್ ವರದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಅರಮನೆ ಆಡಳಿತ ಮಂಡಳಿ ಡಿಡಿ ಸುಬ್ರಹ್ಮಣ್ಯ ಅವರಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಅರಮನೆ ಗೋಡೆ ಬಿರುಕು ಬಿಟ್ಟಿರುವ ಸಂಬಂಧ ಮಾಡಿದ್ದ ಸುದ್ದಿಗೆ ಪ್ರತಿಕ್ರಿಯೆ ಬಯಸಿ ತೆರಳಿದ್ದಾಗ ಸುಬ್ರಹ್ಮಣ್ಯ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಸಹಚರರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಕ್ಯಾಮರಾಮನ್ ರವಿ ಎಂ. ಅವರು ದೂರು ಸಲ್ಲಿಸಿದ್ದಾರೆ.
ನಾನು ಮತ್ತು ನಮ್ಮ ವರದಿಗಾರ ಕೆಂಡಗಣ್ಣ ಅವರು ಅರಮನೆ ಆಡಳಿತ ಮಂಡಳಿ ಕಚೇರಿ ಒಳಗೆ ಪ್ರವೇಶಿಸಿ, ಇಂಡಿಯನ್ ಟಿವಿಯಲ್ಲಿ ಮಾಡಿದ್ದ ವರದಿಗೆ ಪ್ರತಿಕ್ರಿಯೆ ಕೇಳಿದಾಗ ನನ್ನನ್ನು ನೋಡಿದ ಸುಬ್ರಹ್ಮಣ್ಯ ಅವರು ‘ಏನೋ ರವಿ, ನಿಂದು ತಿಕ ಗಾಂಚಾಲಿ ಜಾಸ್ತಿ ಆಯ್ತು, ಜಲಗಾರ ನನ್ನ ಮಗನೆ ಅರಮನೆ ಒಳಗೆ ಕಾಲಿಡುವಷ್ಟು ಧೈರ್ಯ ಬಂದಿದೆ ನಿಂಗೆ, ನೋಡ್ತಿರು ಮಗನೆ ನಿನಗೂ, ನಿನ್ನ ಮೀಡಿಯಾದವರಿಗೂ ಒಂದು ಗತಿ ಕಾಣಿಸ್ತೀನಿ, ಬೋಳಿ ಮಕ್ಕಳ ನೀವು ಏನೂ ಕಿತ್ತುಕೊಳ್ಳೋಕೆ ಆಗಲ್ಲ ನಂದು’ ಎಂದು ಏಕವಚನದಲ್ಲಿ ನಿಂದಿಸಿದರು.
ನನ್ನ ವಿರುದ್ಧವೇ ಸುದ್ದಿ ಪ್ರಸಾರ ಮಾಡ್ತೀರಾ, ನಿಮ್ಮನ್ನು ಕೊಲೆ ಮಾಡಿಸ್ತೀನಿ ಎಂದು ಧಮ್ಕಿಯನ್ನೂ ಹಾಕಿದ್ದಾರೆ. ಈ ವೇಳೆ ನನ್ನ ವೃತ್ತಿಗೆ ಅನುಗುಣವಾಗಿ ಕ್ಯಾಮರಾ ತೆಗೆದುಕೊಂಡ ತಕ್ಷಣ ಸಮರ್ಥ್ ಕೌಶಿಕ್ ಎನ್ನುವವರು ಏಕಾ ಏಕಿ ನನ್ನ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ನಮ್ಮ ವರದಿಗಾರರಾದ ಕೆಂಡಗಣ್ಣ ಅವರು ಇದನ್ನು ವಿರೋಧಿಸಿದಾಗ ಅವರ ಕುತ್ತಿಗೆ ಪಟ್ಟಿಯನ್ನು ಹಿಡಿದು ಗಂಗಾಧರಯ್ಯ ಎನ್ನುವವರು ಗಂಭೀರವಾಗಿ ಹಲ್ಲೆ ನಡೆಸಿದರು. ಅಮ್ಮ, ಅಕ್ಕ ಎಂದೆಲ್ಲಾ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಇವರಿಗೆ ಅಲ್ಲಿಯೇ ಇದ್ದ ಇನ್ನೂ 2-3 ಸಿಬ್ಬಂದಿಯೂ ಬೆಂಬಲ ನೀಡಿದರು. ಅವರು ನಡೆಸಿದ ಹಲ್ಲೆಯಿಂದ ನನ್ನ ಬಲ ಭುಜಕ್ಕೆ ನೋವು ಉಂಟಾಗಿದೆ.
ನಮ್ಮ ವರದಿಗಾರ ಕೆಂಡಗಣ್ಣ ಅವರಿಗೆ ಕಪಾಲ, ಬಲ ಭುಜ, ಬಲ ಭಾಗದ ಎದೆಗೆ ಭಾಗಕ್ಕೆ ಮನಸೋ ಇಚ್ಚೆ ಹಲ್ಲೆ ನಡೆಸಿದರು. ‘ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಕೀಳು ಜಾತಿ ನನ್ನ ಮಕ್ಕಳ, ಏನ್ ಮಾಡ್ತೀವಿ ನೋಡ್ತಿರಿ’ ಎಂದು ತೀರ ಕೆಟ್ಟದಾಗಿ ಮಾತನಾಡಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಇದೆಲ್ಲವನ್ನೂ ಅಲ್ಲಿಯೇ ಇದ್ದ ಡೆಪ್ಯುಟಿ ಡೈರೆಕ್ಟರ್ ಸುಬ್ರಹ್ಮಣ್ಯ ಅವರು ನೋಡುತ್ತಾ, ತಮ್ಮ ಸಿಬ್ಬಂದಿ, ಚೇಲಾಗಳಿಂದ ಹಲ್ಲೆ ಮಾಡಿಸಿದ್ದಾರೆ.
ಇದರ ಜೊತೆಗೆ ನಾವು ಬಿಡಿಸಿಕೊಂಡು ಹೊರಗೆ ಬಂದಾಗಲೂ ಸಾರ್ವಜನಿಕವಾಗಿ ನಮಗೆ ‘ಕೀಳು ಜಾತಿಯ ಬೋಳಿ ಮಕ್ಕಳನ್ನು ಒಳಗೆ ಹಾಕಿಸಿ, ಪೊಲೀಸ್ ಠಾಣೆಗೆ ದೂರು ನೀಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದರು ಎಂದು ಸುಳ್ಳು ಕೇಸ್ ಹಾಕಿಸಿ, ಆಗ ಈ ಜಲಗಾರ ನನ್ಮಗ ಮತ್ತು ಅವನ ರಿಪೋರ್ಟರ್ಗೆ ಬುದ್ದಿ ಬರುತ್ತದೆ’ ಎಂದು ಹೇಳಿ ನಿಂದಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿದ ಜಿಲ್ಲಾ ಪತ್ರಕರ್ತರ ಸಂಘ
ಪತ್ರಕರ್ತರ ಮೇಲಿನ ಹಲ್ಲೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ವ್ಯಾಪಕವಾಗಿ ಖಂಡಿಸಿದೆ. ಈ ಬಗ್ಗೆ ಅಧ್ಯಕ್ಷರಾದ ಕೆ.ದೀಪಕ್ ಅವರು ಮಾತನಾಡಿ, ಮೈಸೂರಿನಲ್ಲಿ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಆಗದ ವಾತಾವರಣ ನಿರ್ಮಾಣ ಆಗಿದ್ಯಾ ಎನ್ನುವ ಆತಂಕ ಕಾಡುತ್ತಿದೆ. ವರದಿಗಾರನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಂಡಿರುವ ಘಟನೆ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು, ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಂಡು ಪತ್ರಕರ್ತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.