ತಾಪಮಾನವು ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೆ ಪರಿಣಾಮಗಳನ್ನು ಬೀರದಿರುಲು ಹಲವು ಬೇಸಿಗೆ ನಿರ್ವಹಣಾ ಕ್ರಮಗಳನ್ನು ಮೈಸೂರು ಮೃಗಾಲಯದಲ್ಲಿ ಕೈಗೊಳ್ಳಲಾಗಿರುತ್ತದೆ.
ಪ್ರಾಣಿ ಪಕ್ಷಿಗಳಿಗೆ ಉಂಟಾಗುವ ಶಾಖದ ಒತ್ತಡವನ್ನು ತಡೆಗಟ್ಟಲು ಮತ್ತು ತಂಪಾದ ವಾತಾವರಣವನ್ನು ನಿರ್ಮಿಸಲು ಎಲ್ಲಾ ಪ್ರಾಣಿ ಮನೆಗಳಲ್ಲಿ ನೀರಿನ ಜೆಟ್‍ಗಳು ಮತ್ತು ನೀರಿನ ಸಿಂಪರಣೆಗಳನ್ನು ಒದಗಿಸಲಾಗಿದೆ.
ರಾತ್ರಿಯಲ್ಲಿ ಒಳಾವರಣಗಳಲ್ಲಿ ಈ ಪ್ರಾಣಿಗಳು ಆರಾಮದಾಯಕ ಸ್ಥಿತಿಯಲ್ಲಿರಲು ಫ್ಯಾನ್‍ಗಳು ಮತ್ತು ಕೂಲರ್ ಗಳ ವ್ಯವಸ್ಥೆ ಯನ್ನು ಮಾಡಲಾಗಿರುತ್ತದೆ. ಹಿಮಾಲಯದ ಕಪ್ಪು ಕರಡಿಗಳಿಗೆ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯವಾಗುವಂತೆ ಆಹಾರವನ್ನು ಐಸ್‍ಬ್ಲಾಕ್ ರೀತಿಯಲ್ಲಿ ಒದಗಿಸಲಾಗುತ್ತಿದೆ.
ತಂಪಾದ ಆಹಾರ ಕ್ರಮವನ್ನು ಖಾತ್ರಿಪಡಿಸಲು ಎಲ್ಲಾ ಬಗೆಯ ವಾನರ ಜಾತಿಯ ಪ್ರಾಣಿಗಳಾದ ಗೊರಿಲ್ಲಾ, ಒರಾಂಗೂಟಾನ್, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು ನೀರಿನಾಂಶವುಳ್ಳ ತರಕಾರಿ ಹಾಗೂ ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ, ಕರಬೂಜ ಇತ್ಯಾದಿಗಳನ್ನು ಅವುಗಳ ಆಹಾರದಲ್ಲಿ ಹೆಚ್ಚಾಗಿ ಸೇರಿಸಿ ನೀಡಲಾಗುತ್ತಿದೆ ಹಾಗೂ ಓ.ಆರ್.ಎಸ್. ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ.
ಎಲ್ಲಾ ಬಗೆಯ ಸಸ್ಯಾಹಾರಿ ಪ್ರಾಣಿಮನೆಗಳಲ್ಲಿ ಕೆಸರಿನ ಕೊಳ ವನ್ನು ನಿರ್ಮಿಸುವ ಮೂಲಕ ಅವುಗಳಿಗೆ ನೈಸರ್ಗಿಕ ತಣ್ಣನೆಯ ವಾತಾವರಣವನ್ನು ಕಲ್ಪಿಸಲಾಗಿದೆ. ಪ್ರಾಣಿಗಳು ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಪ್ರಾಣಿಮನೆಗಳಲ್ಲಿ ಚಪ್ಪರ ಗಳನ್ನು ಒದಗಿಸಲಾಗಿದೆ.
ಪ್ರತಿ ಪ್ರಾಣಿಮನೆಗಳಲ್ಲಿರುವ ಉಷ್ಣಾಂಶವನ್ನು ತಿಳಿದುಕೊಳ್ಳಲು ಉಷ್ಣಮಾಪಕ ಗಳನ್ನು ಆಳವಡಿಸಲಾಗಿರುತ್ತದೆ. ಉಷ್ಣಮಾಪಕಗಳು ಏರುತ್ತಿರುವ ತಾಪಮಾನದಿಂದ ಮೃಗಾಲಯದೊಳಗಿರುವ ಎಲ್ಲಾ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿ ರಕ್ಷಿಸಲು ಹಾಗೂ ಅವುಗಳನ್ನು ಕ್ಷೇಮವಾಗಿರಿಸಲು ಸಹಾಯಕವಾದ ಸಾಧನಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.