ಆ ಹೇಮಾವತಿ ಆನೆಗೆ ಇನ್ನು ಹತ್ತು ವರ್ಷ ಅಷ್ಟೇ. ಬುದ್ದಿಮಟ್ಟ ಆ ಹತ್ತು ವರ್ಷಕ್ಕೆ ಎಷ್ಟಿರ ಬೇಕಿತ್ತೊ ಅಷ್ಟೇ ಇತ್ತು. ಶಿವಮೊಗ್ಗದ ಗಾಜನೂರು ಬಳಿಯ ಸಕ್ರೆಬೈಲು ಆನೆ ಬಿಡಾರದಲ್ಲಿತ್ತು. ಈ ಮಧ್ಯೆ ಹೇಮಾವತಿ ಒಂದು ಹೆಣ್ಣು ಮರಿಯಾನೆಯ ಜನ್ಮಕ್ಕೆ ಕಾರಣರಾದಳು. ತನ್ನ ಮರಿಯನ್ನು ಹೇಮಾವತಿ ಮುದ್ದಾಡುತ್ತಾ ತನ್ನೊಂದಿಗೆ ಕಾಡಿನಲ್ಲಿ ಓಡಾಡಿಸಿಕೊಂಡಿತ್ತು. ಆದರೆ ಆ ಮರಿಯಾನೆ ತಾಯಿಯಿಂದ ದೂರ ಸರಿಯಿತು.
ಹೇಮಾವತಿ ಗರ್ಭಧರಿಸಿದ್ದು ಹತ್ತು ವರ್ಷಕ್ಕೆ. ಅದು ಕಾಡಿನಲ್ಲಿ ಓಡಾಡಿಕೊಂಡಿತ್ತು. ಇದು ಅರಣ್ಯ ಅಧಿಕಾರಿಗಳಿಗೂ ಗೊತ್ತಿತ್ತು. ಕಾಡಿಗೆ ಹೋಗಿ ಆಗಾಗ ಹೇಮಾವತಿಯ ಆರೋಗ್ಯವನ್ನ ತಪಾಸಣೆ ಮಾಡುತ್ತಿದ್ದರು.
ಎಂತಹ ದೌರ್ಭಾಗ್ಯ ಎಂದರೆ ಕಳೆದ ವಾರವಷ್ಟೇ ಜನಿಸಿದ್ದ ಆ ಮರಿಯಾನೆ ತನ್ನ ತಾಯಿಯಿಂದ ದೂರವಾಯಿತು. ಹುಟ್ಟಿದ ದಿನದಿಂದ ಮರಿಯಾನೆಯಲ್ಲಿ ಕಾಣಿಸಿಕೊಂಡಿದ್ದ ಅನಾರೋಗ್ಯ ಅದರ ಸಾವಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ 14 ವರ್ಷ ಆದ ನಂತರವೇ ಆನೆ ಗರ್ಭ ಧರಿಸುವುದು ಸೂಕ್ತ ಕಾಲ. ಆದರೆ ಇಲ್ಲಿ ಹೇಮಾವತಿ 10 ವರ್ಷಕ್ಕೆ ಗರ್ಭಧರಿಸಿ ಅವಧಿ ಪೂರ್ವವಾಗಿ ಮರಿಯಾನೆ ಜನಿಸಿರುವುದೇ ಮರಿಯಾನೆಯ ಸಾವಿಗೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಮರಿಯಾನೆ ಜನಿಸಿದ್ದು ಅರಣ್ಯ ಅಧಿಕಾರಿಗಳಿಗೆ, ವೈದ್ಯರಿಗೆ ಗೊತ್ತಿತ್ತು. ಆದರೆ ಸಕಾಲದಲ್ಲಿ ವೈದ್ಯಕೀಯ ನೆರವು ಮರಿಯಾನೆಗೆ ದೊರಕದಿರುವುದು ಅದರ ಸಾವಿಗೆ ಕಾರಣವಾಗಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ ಈ ಮರಿಯಾನೆಯ ಸಾವಿನ ಸುದ್ದಿ ಹೊರಗೆ ಬಂದರೆ, ತಮ್ಮ ತಪ್ಪುಗಳು ಇದ್ದಲ್ಲಿ ಹೊರ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ.
ಒಟ್ಟಿನಲ್ಲಿ ಹೇಮಾವತಿಯಿಂದ ಜನಿಸಿದ ಆ ಮರಿಯಾನೆಯನ್ನು ಉಳಿಸಿಕೊಳ್ಳುವಲ್ಲಿ ಅರಣ್ಯ ಅಧಿಕಾರಿಗಳು, ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬುದರ ಸತ್ಯಸತ್ಯಾತೆ ಹೊರಬರಬೇಕಿದೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇಂತಹ ಸಾವುಗಳು ಎಂದೂ ಕೂಡ ಮರುಕಳಿಸಬಾರದು ಈ ನಿಟ್ಟಿನಲ್ಲಿ ಅರಣ್ಯ ಸಚಿವರು ಏನು ಕ್ರಮ ಜರುಗಿಸುತ್ತಾರೆ, ಈ ಘಟನೆ ಬಗ್ಗೆ ಏನ್ ಹೇಳುತ್ತಾರೆ ಕಾದುನೋಡಬೇಕಿದೆ.