ಸಂಘ ಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

123 2025 04 26t135109.326

ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ಆದರೆ ಈಗ ದೇಶಭಕ್ತಿಯ ಬಗ್ಗೆ ದೊಡ್ಡದಾಗಿ ಮಾತಾಡುತ್ತದೆ. ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದವರು ಎಂಬ ಸ್ಪಷ್ಟ ತಿಳಿವಳಿಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಯುವ ಕಾಂಗ್ರೆಸ್ ಆಯೋಜಿಸಿದ್ದ “ಯುವ ಕ್ರಾಂತಿ” ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ಸಂಘ ಪರಿವಾರದ ವಿರೋಧಿ ನೀತಿಗಳ ಬಗ್ಗೆ ವಿವರವಾಗಿ ಮಾತನಾಡಿದರು.

ADVERTISEMENT
ADVERTISEMENT

ಕಾಂಗ್ರೆಸ್‌ನ ಕೊಡುಗೆ

“ಸ್ವಾತಂತ್ರ್ಯ ಹೋರಾಟ ಮತ್ತು ಆಧುನಿಕ ಭಾರತದ ನಿರ್ಮಾಣದಲ್ಲಿ ಕಾಂಗ್ರೆಸ್‌ನ ತ್ಯಾಗ ಮತ್ತು ಬಲಿದಾನ ಅಪಾರವಾಗಿದೆ. ದೇಶಕ್ಕೆ ನಾಗರಿಕ ಹಕ್ಕುಗಳನ್ನು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಕಾಂಗ್ರೆಸ್ ಹುಟ್ಟಿತು,” ಎಂದು ಸಿಎಂ ತಿಳಿಸಿದರು. ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ನೀಡಿದಂತೆ, ಜವಾಹರಲಾಲ್ ನೆಹರು ಅಂಬೇಡ್ಕರ್ ಅವರ ಸಂವಿಧಾನಕ್ಕೆ ಭದ್ರ ಬುನಾದಿ ಹಾಕಿದರು. ಬಹುತ್ವದ ಭಾರತದಲ್ಲಿ ಏಕತೆಯನ್ನು ತಂದು ಸಹಿಷ್ಣುತೆಯನ್ನು ಆಚರಣೆಗೆ ತಂದ ನೆಹರೂ ಅವರ ಕೊಡುಗೆ ಅನನ್ಯವಾದದ್ದು ಎಂದರು.

ಸಂಘ ಪರಿವಾರದ ವಿರೋಧಿ ನಿಲುವು

ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲಿಲ್ಲ. ಈಗ ದೇಶಭಕ್ತಿಯ ಬಗ್ಗೆ ಮಾತಾಡುವವರು, ಸಾವರ್ಕರ್ ಮತ್ತು ಗೋಲ್ವಾಲ್ಕರ್‌ರಂತಹ ನಾಯಕರನ್ನು ಒತ್ತಿಹಿಡಿಯುತ್ತಾರೆ. ಆದರೆ, ಅವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದವರು ಎಂದು ಸಿಎಂ ವ್ಯಂಗ್ಯವಾಡಿದರು.

“ಮನುಸ್ಮೃತಿಯಿಂದ ಪ್ರೇರಿತವಾದ ಜಾತಿ ವ್ಯವಸ್ಥೆ ಭಾರತೀಯ ಸಮಾಜವನ್ನು ಒಡೆದು ಜಾತಿ ಆಧಾರದಲ್ಲಿ ಬಿರುಕು ಮೂಡಿಸಿತು. ಈ ಇತಿಹಾಸ ಯುವ ಕಾರ್ಯಕರ್ತರಿಗೆ ಗೊತ್ತಿರಬೇಕು,” ಎಂದು ಅವರು ಒತ್ತಿ ಹೇಳಿದರು.

ಯುವ ಕಾಂಗ್ರೆಸ್‌ನ ಪಾತ್ರ

“ಯುವ ಕಾಂಗ್ರೆಸ್ ಎಂದರೆ ಭಾರತದ ಸಂವಿಧಾನ ಮತ್ತು ಬಹುತ್ವವನ್ನು ರಕ್ಷಿಸಲು ನಿಂತ ಯುವ ಸೈನ್ಯ. ಕಾಂಗ್ರೆಸ್ ಏಕೆ ಕಟ್ಟುತ್ತಿದ್ದೇವೆ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಹೇಗೆ ಸಂವಿಧಾನ ವಿರೋಧಿ ಎಂಬ ಸ್ಪಷ್ಟತೆ ಯುವ ಕಾರ್ಯಕರ್ತರಿಗೆ ಇರಬೇಕು. ಈ ಸ್ಪಷ್ಟತೆ ಇಲ್ಲದವರು ಕಾಂಗ್ರೆಸ್‌ನಲ್ಲಿ ದೀರ್ಘಕಾಲ ಉಳಿಯಲಾರರು,” ಎಂದು ಸಿಎಂ ಎಚ್ಚರಿಕೆ ನೀಡಿದರು.

ಸಂವಿಧಾನದ ಆಶಯ

“ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ, ಸಹಿಷ್ಣುತೆ ಮತ್ತು ಸಹಬಾಳ್ವೆ ನಮ್ಮ ಸಂವಿಧಾನದ ಉಸಿರು. ಇದೇ ಭಾರತದ ಉಸಿರು ಕೂಡ. ಅಂಬೇಡ್ಕರ್ ಹೇಳಿದಂತೆ, ಅಧಿಕಾರ ಬಲಾಡ್ಯರ ಕೈಯಲ್ಲಿರಬಾರದು, ಜನಸಾಮಾನ್ಯರ ಕೈಯಲ್ಲಿರಬೇಕು. ಕಾಂಗ್ರೆಸ್ ಜನರಿಗೆ ಅಧಿಕಾರ ಮತ್ತು ಅವಕಾಶಗಳನ್ನು ನೀಡುತ್ತಿದೆ. ಆದರೆ, ಬಿಜೆಪಿ ಬಲಾಡ್ಯರಿಗೆ ಅಧಿಕಾರ ನೀಡುತ್ತಿದ್ದು, ಇದು ಸಂವಿಧಾನ ವಿರೋಧಿಯಾಗಿದೆ,” ಎಂದು ಅವರು ತಿಳಿಸಿದರು.

ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್‌ನ ಕೊಡುಗೆ

ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಸಮಾನತೆಯನ್ನು ಕಡಿಮೆ ಮಾಡುವ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಸ್ವಾತಂತ್ರ್ಯದ ಸಾರ್ಥಕತೆಗೆ ಪ್ರತಿಯೊಬ್ಬರೂ ಆರ್ಥಿಕ ಮತ್ತು ಸಾಮಾಜಿಕ ಸಬಲತೆ ಪಡೆಯಬೇಕು. ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ಕೊಡುವುದೇ ಸರ್ವೋದಯದ ಆಶಯ ಎಂದು ಸಿಎಂ ಒತ್ತಿ ಹೇಳಿದರು.

ಮೌಡ್ಯದ ವಿರುದ್ಧ ಎಚ್ಚರಿಕೆ

ಮೌಡ್ಯ, ಕಂದಾಚಾರ ಮತ್ತು ಕರ್ಮ ಸಿದ್ಧಾಂತವನ್ನು ಕೃತಕವಾಗಿ ಸೃಷ್ಟಿಸಿ, ಅದಕ್ಕೆ ನೀರು-ಗೊಬ್ಬರ ಹಾಕಿ ಗಟ್ಟಿಗೊಳಿಸಲಾಗಿದೆ. ದೇವರು ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಮಾಡುವುದಿಲ್ಲ. ದೇವರ ಹೆಸರಲ್ಲಿ ಮೌಡ್ಯ ಬಿತ್ತುವವರ ಬಗ್ಗೆ ಎಚ್ಚರಿಕೆಯಿರಲಿ. ಬಸವಣ್ಣನವರು ಹೇಳಿದಂತೆ ದೇವರನ್ನು ಕಾಣಬೇಕು. ಪಾಪ ಮಾಡಿ ದೇವರಿಗೆ ಕೈ ಮುಗಿದರೆ ಪಾಪ ಹೋಗುವುದಿಲ್ಲ. ಬಿಜೆಪಿ ದೇವರು ಮತ್ತು ಧರ್ಮದ ಹೆಸರಲ್ಲಿ ಸುಳ್ಳು ಹರಡುತ್ತಿದೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಕರೆ ನೀಡಿದರು.

ಬಿಜೆಪಿಯ ಸಂವಿಧಾನ ವಿರೋಧಿ ನಿಲುವು

ಅಂಬೇಡ್ಕರ್ ಅವರೇ ಬರೆದಿದ್ದಾರೆ, ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದವರು ಸಾವರ್ಕರ್ ಮತ್ತು ಢಾಂಗೆ ಎಂದು. ರಾಜೀವ್ ಗಾಂಧಿ ಕೊಟ್ಟ ಮೀಸಲಾತಿಯನ್ನು ವಿರೋಧಿಸಿ ಬಿಜೆಪಿಯ ರಾಮಾ ಜೋಯಿಸ್ ನ್ಯಾಯಾಲಯದ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯ ರಾಜೀವ್ ಗಾಂಧಿಯವರ ತಿದ್ದುಪಡಿಯನ್ನು ಸಂವಿಧಾನಕ್ಕೆ ಸಮ್ಮತವೆಂದು ಎತ್ತಿಹಿಡಿಯಿತು. ಬಿಜೆಪಿ ಮಂಡಲ್ ವರದಿಯನ್ನೂ ವಿರೋಧಿಸಿತು ಎಂದು ಸಿಎಂ ತಿಳಿಸಿದರು.

ಯುವ ಕಾರ್ಯಕರ್ತರಿಗೆ ಕರೆ

ಇತಿಹಾಸ ಮತ್ತು ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇದ್ದರೆ, ನೀವು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬೆಳೆಯುತ್ತೀರಿ. ಯುವ ಕಾಂಗ್ರೆಸ್ ಇಂತಹ ಕಾರ್ಯಾಗಾರಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಯುವ ಕಾರ್ಯಕರ್ತರಿಗೆ ಕರೆ ನೀಡಿದರು.

Exit mobile version