ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ಗ್ರಾಮದಲ್ಲಿ ತಾಯಿಯನ್ನು ತನ್ನ ಮಗನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜನ್ಮದಾತೆಯನ್ನು ಕೊಂದು ನಾಟಕವಾಡಿದ್ದ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ತನಿಖೆಯಿಂದ ತಾಯಿ ಮಹಾದೇವಿಯ ಕೊಲೆಯನ್ನು ಆಕೆಯ ಮಗ ನಾಗರಾಜನೇ ಮಾಡಿರುವುದು ಬೆಳಕಿಗೆ ಬಂದಿದೆ.
ಮಹಾದೇವಿ ತನ್ನ ಗಂಡ ಇದ್ದಾಗಲೇ ಪರಪುರುಷರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪವಿತ್ತು. ಗಂಡನ ಮರಣದ ನಂತರ ಈ ಸಂಬಂಧಗಳು ಮತ್ತಷ್ಟು ಹೆಚ್ಚಾಗಿದ್ದವು. ಇದರ ಜೊತೆಗೆ ಮಹಾದೇವಿಗೆ ಮದ್ಯಪಾನದ ಚಟವಿತ್ತು. ಆಗಾಗ ರಾತ್ರಿ ವೇಳೆ ತಡವಾಗಿ ಮನೆಗೆ ಬರುತ್ತಿದ್ದಳು ಮತ್ತು ಕೆಲವೊಮ್ಮೆ ರಾತ್ರಿಯೇ ಮನೆ ಬಿಟ್ಟು ಹೋಗುತ್ತಿದ್ದಳು. ಈ ವಿಷಯಗಳಿಂದ ಕುಪಿತನಾಗಿದ್ದ ಮಗ ನಾಗರಾಜ ತಾಯಿಯ ಜೊತೆ ಪದೇ ಪದೇ ಜಗಳವಾಡುತ್ತಿದ್ದ.
ಕೊಲೆಯಾದ ದಿನ(ಏಪ್ರಿಲ್ 21) ರಾತ್ರಿ ಮಹಾದೇವಿ ಮತ್ತು ನಾಗರಾಜನ ನಡುವೆ ತೀವ್ರ ಜಗಳವಾಗಿತ್ತು. ಈ ವೇಳೆ ಕೋಪಗೊಂಡ ನಾಗರಾಜ ತಾಯಿಯನ್ನು ಹೊಡೆದು ತಳ್ಳಿದ್ದಾನೆ. ಇದರಿಂದ ಮಹಾದೇವಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.
ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದಾಗ ನಾಗರಾಜನೇ ಕೊಲೆಗೈದಿರುವುದು ದೃಢಪಟ್ಟಿದೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗರಾಜನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.