ತುಮಕೂರು: ತುಮಕೂರಿನ ಆಟೋ ಚಾಲಕನೊಬ್ಬ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ. ತುಮಕೂರಿನ ರವಿಕುಮಾರ್ ಎಂಬುವವರು ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ಆಟೋ ಚಾಲಕ.
ಘಟನೆ ವಿವರ:
ಗಾಯತ್ರಿ ಎಂಬ ಮಹಿಳೆ ಹಾಸನ ಜಿಲ್ಲೆ ಅರಸೀಕೆರೆಯಿಂದ ಸೀಮಂತ ಕಾರ್ಯಕ್ರಮಕ್ಕಾಗಿ ತುಮಕೂರಿನ ಕುಂದೂರಿಗೆ ಆಗಮಿಸಿದ್ದರು. ತಮ್ಮ ಸಂಬಂಧಿಕರ ಮನೆಯಿಂದ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಪ್ರಯಾಣಿಸಿದ್ದರು. ಆದರೆ ಅವರು ರಿಕ್ಷಾದಿಂದ ಇಳಿದು ಹೋಗುವಾಗ ತಮ್ಮ ಚಿನ್ನಾಭರಣವಿರುವ ಬ್ಯಾಗ್ ಮರೆತುಬಿಟ್ಟಿದ್ದರು.
ಕೆಲವು ಹೊತ್ತಿನ ನಂತರ, ಆಟೋ ಚಾಲಕ ರವಿಕುಮಾರ್ ರಿಕ್ಷಾ ಒಳಗೆ ಬ್ಯಾಗ್ ಇರುವುದು ಗಮನಿಸಿದ್ದಾನೆ. ಬ್ಯಾಗ್ ತೆರೆಯುವಾಗ ಅದರಲ್ಲಿ ಚಿನ್ನಾಭರಣ ಇರುವುದು ಕಂಡುಬಂದಿದೆ. ಆದರೆ ಬ್ಯಾಗ್‌ನ ಮಾಲೀಕರ ಸಂಪರ್ಕ ಹಾಗೂ ವಿವರಗಳು ಇಲ್ಲದ ಕಾರಣ ಆಟೋ ಚಾಲಕ ಕೂಡಲೇ ಪೊಲೀಸರ ಮೊರೆ ಹೋಗಿದ್ದಾನೆ.
ಪ್ರಾಮಾಣಿಕ ಆಟೋ ಚಾಲಕನ ನಡೆ:
ರಿಕ್ಷಾ ಚಾಲಕ ರವಿಕುಮಾರ್ ಬ್ಯಾಗ್ ಅನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರ ಶೋಧ ಕಾರ್ಯಾಚರಣೆಯಿಂದ ಗಾಯತ್ರಿ ಅವರನ್ನು ಪತ್ತೆ ಹಚ್ಚಿ, ಅವರಿಗೆ ಚಿನ್ನಾಭರಣವಿದ್ದ ಬ್ಯಾಗ್ ಹಸ್ತಾಂತರಿಸಲಾಯಿತು. ತಮ್ಮ ಚಿನ್ನಾಭರಣವಿದ್ದ ಬ್ಯಾಗ್ ಸಿಕ್ಕಿತೆಂದು ಸಂತೋಷಗೊಂಡ ಗಾಯತ್ರಿ, ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ಕೃತಜ್ಞತೆ ತಿಳಿಸಿದ್ದಾರೆ.