ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಮುಸ್ಲಿಂ ಸಮುದಾಯದ ಮುಖಂಡರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ವಿಚಾರವಾಗಿ ಯತ್ನಾಳ್ ಸ್ಪಷ್ಟನೆ ನೀಡಿದ್ದರೂ, ಅಲ್ಪಸಂಖ್ಯಾತ ಮುಖಂಡರು ತಮ್ಮ ಕೋಪವನ್ನು ಶಾಂತಗೊಳಿಸಿಲ್ಲ. ನಾಳೆ ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ್ ವಿರುದ್ಧ ಬೃಹತ್ ಹೋರಾಟ ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಹೌದು, ಕಳೆದ ಏಪ್ರಿಲ್ 7ರಂದು ರಾಮನವಮಿ ದಿನದಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಯತ್ನಾಳ್, “ಬಾಳಾಸಾಹೇಬ್ ಠಾಕ್ರೆ ಮನೆಯಲ್ಲಿ ಪೈಗಂಬರ್ ಹುಟ್ಟಿದ್ದಾರೆ” ಎಂದು ಹೇಳಿದ್ದ ಆರೋಪವಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಯತ್ನಾಳ್, ತಾವು ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ಮಾತಿನ ವೇಗದಲ್ಲಿ ತಪ್ಪಾಗಿ ಹೇಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ಸ್ಪಷ್ಟನೆಯನ್ನು ಒಪ್ಪದ ಮುಸ್ಲಿಂ ಸಮುದಾಯದ ಮುಖಂಡರು, ರಾಜ್ಯದಾದ್ಯಂತ ಹಲವೆಡೆ ಪ್ರತಿಭಟನೆಗಳನ್ನು ಆಯೋಜಿಸಿದ್ದಾರೆ.
ಈಗ ವಿಜಯಪುರದಲ್ಲಿ ಸುಮಾರು 10,000 ಜನರನ್ನು ಸೇರಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಸಿದ್ಧತೆ ನಡೆದಿದೆ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತವಾಗಿ ಮೆರವಣಿಗೆ ನಡೆಸುವ ಯೋಜನೆಯಿದೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಯತ್ನಾಳ್, “ಪ್ರತಿಭಟನೆಯ ಹೆಸರಿನಲ್ಲಿ ಹಿಂದೂಗಳ ಆಸ್ತಿಗೆ ಹಾನಿಯಾದರೆ, ಸಂಘಟಕರೇ ನೇರ ಹೊಣೆಗಾರರು. ಈಗಾಗಲೇ ಗೃಹ ಸಚಿವರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಪ್ರತಿಭಟನೆಗೂ ಮುನ್ನ ಸಂಘಟಕರಿಂದ ಬಾಂಡ್ ಬರೆಸಿಕೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.
ಆದರೆ, ಯತ್ನಾಳ್ ಅವರ ಈ ಹೇಳಿಕೆಗೆ ಕಿಡಿಕಾರಿರುವ ಮುಸ್ಲಿಂ ಮುಖಂಡರು, “ನಮ್ಮ ಹೋರಾಟ ಹಿಂದೂಗಳ ವಿರುದ್ಧ ಅಥವಾ ಅವರ ಆಸ್ತಿಯ ವಿರುದ್ಧ ಅಲ್ಲ. ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಯತ್ನಾಳ್ ವಿರುದ್ಧ ಮಾತ್ರ ಇದು. ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಪೈಗಂಬರ್ ಅವರಿಗೆ ಅಶಾಂತಿ ಉಂಟುಮಾಡುವ ಕಾರ್ಯ ನಮ್ಮಿಂದ ಆಗುವುದಿಲ್ಲ. ಯತ್ನಾಳ್ ಮತ್ತು ಅವರ ಬೆಂಬಲಿಗರಿಂದಲೇ ಬಾಂಡ್ ಬರೆಸಿಕೊಳ್ಳಬೇಕು. ಪ್ರತಿಭಟನೆ ಮುಗಿಯುವರೆಗೆ ಅವರನ್ನು ಗಡಿಪಾರು ಮಾಡಬೇಕು,” ಎಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಒದಗಿಸಿದೆ. ವಿಜಯಪುರ ನಗರದಲ್ಲಿ ನಾಳೆ ನಡೆಯಲಿರುವ ಈ ಹೋರಾಟ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.