ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಕ್ತಾಪೂರ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿ, ಕುಡಿಯುವ ನೀರಿನ ಅಭಾವದಿಂದ ಮಹಿಳೆಯರು ಸ್ನಾನದ ನೀರನ್ನೇ ಬಟ್ಟೆ ತೊಳೆಲು ಬಳಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದರು. ನೀರಿನ ಸಮಸ್ಯೆ ಬಗ್ಗೆ ಗ್ಯಾರಂಟಿ ನ್ಯೂಸ್‌ನಲ್ಲಿ ಸುದ್ದಿ ಬಿತ್ತರಿಸಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ನೀರು ಪೂರೈಕೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಜಿಪಂ ಸಿಇಓ ಲವೀಶ್ ಒರಡಿಯಾ ಅವರು ಯಕ್ತಾಪೂರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚಿಸಿದರು. ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ವಿವರಿಸಿದ್ದು, ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ನಂತರ ಜಿ.ಪಂ ಸಿಇಓ ಲವೀಶ್ ಅವರು ಅಧಿಕಾರಿಗಳಿಗೆ ಟ್ಯಾಂಕರ್ ಹಾಗೂ ಖಾಸಗಿ ಬೊರವಲ್ ಬಾಡಿಗೆ ಪಡೆದು ನಲ್ಲಿಗಳ ಮೂಲಕ ತಾತ್ಕಾಲಿಕವಾಗಿ ಮನೆಗಳಿಗೆ ನೀರು ಪೂರೈಸುವಂತೆ ಸೂಚನೆ ನೀಡಿದ್ದಾರೆ. ಕೆಕೆಆರ್‌ಡಿಬಿಯಿಂದ 65 ಲಕ್ಷ ರೂ. ಅನುದಾನ ಮೀಸಲಾಗಿದ್ದು, ಶಾಶ್ವತ ನೀರಿನ ಯೋಜನೆಗೆ ಶೀಘ್ರ ಟೆಂಡರ್ ಕರೆಯುವಂತೆ ಸೂಚಿಸಿದ್ದಾರೆ.
ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಬಾವಿಯಿಂದ ನೀರು ಪೂರೈಕೆಯ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸಿಇಓ ಲವೀಶ್ ಒರಡಿಯಾ ಅವರು ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಈ ಕ್ರಮದಿಂದ ಗ್ರಾಮಸ್ಥರಲ್ಲಿ ಹೊಸ ನಿರೀಕ್ಷೆ ಮೂಡಿದೆ. ವರ್ಷಗಳಿಂದ ನಲುಗುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ವಿಶ್ವಾಸ ಜನರಲ್ಲಿ ಮೂಡಿದೆ.