ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಮನೆಗಳು, ಅಂಗಡಿಗಳೊಳಗೆ ನೀರು ನುಗ್ಗಿದ್ದು, ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದೆ. ಈ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ.
ಗುರುಮಠಕಲ್ ಪಟ್ಟಣದಲ್ಲಿ ಮಳೆಯ ರಭಸಕ್ಕೆ ರಸ್ತೆಗಳು ಜಲಾವೃತವಾಗಿದ್ದು, ಮನೆಗಳು ಮತ್ತು ಅಂಗಡಿಗಳೊಳಗೆ ನೀರು ನುಗ್ಗಿದೆ. ಸ್ಥಳೀಯರು ನೀರನ್ನು ಖಾಲಿ ಮಾಡಲು ಪರದಾಡುವಂತಾಗಿದೆ. ಮಳೆಯ ಜೊತೆಗೆ ಬಂದ ಆಲಿಕಲ್ಲುಗಳು ಜನರ ಚಲನವಲನಕ್ಕೂ ತೊಂದರೆಯುಂಟು ಮಾಡಿವೆ.
ಭತ್ತದ ಬೆಳೆಗೆ ಭಾರೀ ಹಾನಿ
ಮಳೆಯ ಅರ್ಭಟಕ್ಕೆ ಗುರುಮಠಕಲ್ ತಾಲೂಕಿನ ಹಿಮಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆ ನೀರಿನಲ್ಲಿ ಮುಳುಗಿಹೋಗಿದೆ. ಈ ಭಾರೀ ಮಳೆಯಿಂದಾಗಿ ಬೆಳೆಗೆ ತೀವ್ರ ಹಾನಿಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. “ಕೊಯ್ಲಿಗೆ ಸಿದ್ಧವಾಗಿದ್ದ ಭತ್ತದ ಬೆಳೆ ಈಗ ನೀರಿನಲ್ಲಿ ಕೊಳೆಯುತ್ತಿದೆ. ನಮ್ಮ ಶ್ರಮವೆಲ್ಲ ವ್ಯರ್ಥವಾಯಿತು,” ಎಂದು ಸ್ಥಳೀಯ ರೈತರೊಬ್ಬರು ಕಣ್ಣೀರಿಟ್ಟಿದ್ದಾರೆ. ಬೆಳೆಹಾನಿಯಿಂದ ತೀವ್ರ ನಷ್ಟ ಅನುಭವಿಸಿರುವ ರೈತರು, ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ಮತ್ತು ಸಹಾಯಧನ ನೀಡುವಂತೆ ಒತ್ತಾಯಿಸಿದ್ದಾರೆ. ಜಿಲ್ಲಾಡಳಿತದಿಂದ ಬೆಳೆಹಾನಿ ಸಮೀಕ್ಷೆ ನಡೆಸಿ, ರೈತರಿಗೆ ಆರ್ಥಿಕ ನೆರವು ಒದಗಿಸಬೇಕೆಂದು ಆಗ್ರಹಿಸಲಾಗಿದೆ.