ರಾಜ್ಯದ ಮೂರು ಉಪಚುನಾವಣೆ ಗೆದ್ದ ಬಳಿಕ ಕಾಂಗ್ರೆಸ್ ನಲ್ಲಿ ಈಗ ಮತ್ತೆ ಮುಂದಿನ ಸಿಎಂ ಕೂಗು ಎದ್ದಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಶಾಸಕರೇ ಧ್ವನಿ ಎತ್ತಿದ್ದು, ಮತ್ತೊಂದು ಸಮರದ ಮುನ್ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾಗಿದೆ NEXT CM ಅಭಿಯಾನ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಯುದ್ಧ ಸಾರಿದ್ದಾರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರು. ಬೈಎಲೆಕ್ಷನ್ ಫಲಿತಾಂಶದ ಬಳಿಕ ಡಿಕೆಶಿ ಬಣದಲ್ಲಿ ರಣೋತ್ಸಾಹ ಕಂಡುಬರುತ್ತಿದೆ. ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು ಎಂಬ ಪಣ ತೊಟ್ಟಿದ್ದಾರೆ. ಹೀಗಾಗಿ ತಣ್ಣಗಾಗಿದ್ದ ವಿವಾದಕ್ಕೆ ಮತ್ತೆ ಬೆಂಕಿ ಹಚ್ಚಿದ್ದಾರೆ ಡಿಕೆ ಶಿವಕುಮಾರ್ ಬಣದ ನಾಯಕರು.
ಡಿಕೆ ಶಿವಕುಮಾರ್ 200% ಸಿಎಂ ಆಗ್ತಾರೆ ಎಂದು ಶಾಸಕ ಉದಯ್ ಕದಲೂರು ಬಹಿರಂಗವಾಗಿ ಹೇಳಿದ್ದಾರೆ. ಮದ್ದೂರು ಕಾಂಗ್ರೆಸ್ ಶಾಸಕರಾದ ಉದಯ್ ಕೂದಲೂರು ಅವರು ಡಿಕೆಶಿ ಸಿಎಂ ಆಗುವ ಬಗ್ಗೆ ಶೀಘ್ರವೇ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಹೇಳಿದ್ದಾರೆ. ಇತ್ತ ಕುಣಿಗಲ್ ಶಾಸಕ ರಂಗನಾಥ್ ರಿಂದಲೂ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅವರು ಸಿಎಂ ಆಗುವುದನ್ನು ಯಾರಿಂದಲೂ ತಡೆಯಲು ಆಗಲ್ಲ. ಒಕ್ಕಲಿಗರ ಸಾಮ್ರಾಜ್ಯದ ನಾಯಕರಾಗಿ ಡಿಕೆಶಿ ಹೊರಹೊಮ್ಮಿದ್ದಾರೆ ಎಂದು ‘ಗ್ಯಾರಂಟಿ ನ್ಯೂಸ್’ ಗೆ ಕಾಂಗ್ರೆಸ್ ಶಾಸಕರು EXCLUSIVE ಹೇಳಿಕೆ ನೀಡಿದ್ದಾರೆ.