ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು 17 ಫೆಬ್ರವರಿ 2025ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘಟನೆಯ ಪ್ರತಿನಿಧಿಗಳು ಭೇಟಿಯಾಗಿ, ಕರ್ನಾಟಕ ಲೋಕಸೇವಾ ಆಯೋಗದ (KPSC) ಕೆಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಎದುರಾಗಿರುವ ಅನ್ಯಾಯವನ್ನು ಸರಿಪಡಿಸಲು ಮರುಪರೀಕ್ಷೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ . ಈ ಸಂದರ್ಭದಲ್ಲಿ, KPSC ಪ್ರಶ್ನೆಪತ್ರಿಕೆಯ ಕನ್ನಡ ಭಾಷಾಂತರದ ಸಮಯದಲ್ಲಿ 79 ಪ್ರಶ್ನೆಗಳು ತಪ್ಪಾಗಿ ಅನುವಾದಿತವಾಗಿದ್ದು, ಇದರಿಂದ ಸಾವಿರಾರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘ ಆರೋಪಿಸಿದೆ.
ಪ್ರಸ್ತುತ, ಡಿಸೆಂಬರ್ 2024ರಲ್ಲಿ ನಡೆದ ಮರುಪರೀಕ್ಷೆಯಲ್ಲೂ ಭಾಷಾಂತರದ ದೋಷಗಳು ಮತ್ತು OMR ಶೀಟ್‌ಗಳಲ್ಲಿನ ತಾಂತ್ರಿಕ ತೊಡಕುಗಳು ಪುನರಾವರ್ತನೆಯಾಗಿ, ಅಭ್ಯರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮವಾಗಿ, ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಸಂಖ್ಯೆ ಕೆಳಮುಖವಾಗಿದೆ ಎಂಬುದು ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘದವರ ಪ್ರಮುಖ ಆರೋಪ. ರಾಜ್ಯಪಾಲರಿಗೆ ಸಲ್ಲಿಸಿದ ದೂರಿನಲ್ಲಿ, “KPSC ಕನ್ನಡದ ಕಗ್ಗೊಲೆ ಮಾಡಿದೆ” ಎಂದು ಖಂಡಿಸಲಾಗಿದ್ದು, ತಕ್ಷಣ ಮರುಪರೀಕ್ಷೆ ನಡೆಸಲು ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಒತ್ತಾಯಿಸಲಾಗಿದೆ.
ರಾಜ್ಯಪಾಲರು ಈ ಮನವಿಗೆ ಸ್ಪಂದಿಸಿ, “ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ” ಭರವಸೆ ನೀಡಿದ್ದಾರೆ . ಅವರು, KPSCಯ ನಿರ್ಲಕ್ಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಇದಕ್ಕೆ ಮುಂಚೆ, KPSC ಪರೀಕ್ಷೆಯಲ್ಲಿ 45-50% ಭಾಷಾಂತರ ದೋಷಗಳು ಕಂಡುಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವೂ ಈ ತಪ್ಪುಗಳನ್ನು ದೃಢಪಡಿಸಿದೆ.
ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘದ ನೇತೃತ್ವದಲ್ಲಿ, ರಾಜ್ಯದಾದ್ಯಂತದ ವಿದ್ಯಾರ್ಥಿಗಳು ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಇದು KPSCಯ ಸುಧಾರಣೆ ಮತ್ತು ಮರುಪರೀಕ್ಷೆಗೆ ಒತ್ತಡ ಹೇರುವ ಉದ್ದೇಶ ಹೊಂದಿದೆ. ರಾಜ್ಯಪಾಲರ ಹಸ್ತಕ್ಷೇಪವು ಈ ಹೋರಾಟಕ್ಕೆ ಹೊಸ ಚೈತನ್ಯ ನೀಡಿದೆ ಎಂದು ವಿದ್ಯಾರ್ಥಿ ಸಮುದಾಯವು ನಂಬಿದೆ.